ಅಲ್ವಾರ್ ದುರಂತ ; ಕಾರಿಗೆ ಬೆಂಕಿ ತಗುಲಿ ಒಂದೇ ಕುಟುಂಬದ ಐವರ ಸಾವು
ಅಲ್ವಾರ್ (ರಾಜಸ್ಥಾನ), 30 ಏಪ್ರಿಲ್ (ಹಿ.ಸ.) : ಆ್ಯಂಕರ್ : ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಲಕ್ಷ್ಮಣಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿಗೆ ಬೆಂಕಿ ತಗುಲಿ ಒಂದೇ ಕುಟುಂಬದ ಐವರು ಜೀವಂತವಾಗಿ ಸುಟ್ಟು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಚಾಲಕ ಗಂಭೀರವಾಗಿ ಗಾಯ
Car fire


ಅಲ್ವಾರ್ (ರಾಜಸ್ಥಾನ), 30 ಏಪ್ರಿಲ್ (ಹಿ.ಸ.) :

ಆ್ಯಂಕರ್ : ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಲಕ್ಷ್ಮಣಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿಗೆ ಬೆಂಕಿ ತಗುಲಿ ಒಂದೇ ಕುಟುಂಬದ ಐವರು ಜೀವಂತವಾಗಿ ಸುಟ್ಟು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜೈಪುರದ ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೆಹಲಿ–ಮುಂಬೈ ಎಕ್ಸ್ಪ್ರೆಸ್ವೇಯ ಮೌಜ್ಪುರ್ ಸಮೀಪ ಬುಧವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.

ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಚೈನ್ಪುರಾ ಗ್ರಾಮದ ಕುಟುಂಬವು ವೈಷ್ಣೋ ದೇವಿ ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಅಪಘಾತ ನಡೆದಿದೆ.

ಪೊಲೀಸರ ಪ್ರಕಾರ, ಬಾಡಿಗೆಗೆ ಪಡೆದಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಸಿಎನ್ಜಿ ಅನಿಲ ಸೋರಿಕೆಯಾಗಿದ್ದು, ಕ್ಷಣಾರ್ಧದಲ್ಲೇ ಕಾರು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ವಾಹನದಲ್ಲಿದ್ದವರು ಹೊರಬರುವ ಅವಕಾಶವೇ ಸಿಗಲಿಲ್ಲ. ಆದರೆ ಚಾಲಕ ಮಾತ್ರ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಐವರ ದುರಂತ ಮರಣ

ಅಪಘಾತದಲ್ಲಿ ಮೂವರು ಮಹಿಳೆಯರು, ಒಬ್ಬ ಪುರುಷ ಹಾಗೂ ಒಂದು ಮಗು ಸೇರಿ ಐವರು ಸಾವನ್ನಪ್ಪಿದ್ದಾರೆ. ಬೆಂಕಿಯ ತೀವ್ರತೆಯಿಂದ ಮೃತದೇಹಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಗುರುತಿಸಲು ಡಿಎನ್ಎ ಪರೀಕ್ಷೆಗೆ ಕಳುಹಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ

ಮಾಹಿತಿ ತಿಳಿದ ತಕ್ಷಣ ಲಕ್ಷ್ಮಣಗಢ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಸುಮಾರು 15 ನಿಮಿಷಗಳ ಕಾರ್ಯಾಚರಣೆಯ ನಂತರ ಬೆಂಕಿ ನಿಯಂತ್ರಣಕ್ಕೆ ಬಂದರೂ, ಆದಾಗಲೇ ಕಾರು ಸಂಪೂರ್ಣವಾಗಿ ಕರಕಲಾಗಿತ್ತು.

ಅಧಿಕಾರಿಗಳ ಮಾಹಿತಿ

ಲಕ್ಷ್ಮಣಗಢ ಠಾಣಾಧಿಕಾರಿ ನೇಕಿ ರಾಮ್ ಅವರು, “ಸಿಎನ್ಜಿ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ. ಅದೇ ವೇಳೆ ಅಲ್ವಾರ್ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಚೌಧರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಾಥಮಿಕ ತನಿಖೆಯಲ್ಲಿ ಅನಿಲ ಸೋರಿಕೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಶಾರ್ಟ್ ಸರ್ಕ್ಯೂಟ್ನ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande