ಎಂ.ಆರ್.ಪಿ ಕಡ್ಡಾಯ ನಿಯಮ ; ನೇಪಾಳ ಗಡಿಯಲ್ಲಿ ನಿಂತ ಸರಕು ಸಾಗಣೆ ವಾಹನಗಳು
ಅವಕಾಶ
ಸರಕು ವಾಹನಗಳು


ಕಠ್ಮಂಡು, 30 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನೇಪಾಳ ಸರ್ಕಾರ ಜಾರಿಗೆ ತಂದಿರುವ ಗರಿಷ್ಠ ಚಿಲ್ಲರೆ ಬೆಲೆ (ಎಂ.ಆರ್.ಪಿ) ಕಡ್ಡಾಯ ನಿಯಮದಿಂದ ದೇಶದ ಗಡಿ ಚೆಕ್‌ ಪೋಸ್ಟ್‌ಗಳಲ್ಲಿ ತೀವ್ರ ಗೊಂದಲ ಉಂಟಾಗಿದ್ದು, ನೂರಾರು ಕಂಟೈನರ್ ಗಳು ತೆರವುಗೊಳ್ಳದೆ ಸಿಲುಕಿಕೊಂಡಿವೆ. ಕಸ್ಟಮ್ಸ್ ಕ್ಲಿಯರೆನ್ಸ್ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿರುವುದರಿಂದ ಸರಕು ಸಾಗಣೆ ಮೇಲೆ ಗಂಭೀರ ಪರಿಣಾಮ ಬೀರಿದೆ

ವಾಣಿಜ್ಯ ಇಲಾಖೆಯು ಏಪ್ರಿಲ್ 1ರಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಏಪ್ರಿಲ್ 30ರಿಂದ ವಿದೇಶದಿಂದ ಆಮದು ಆಗುವ ಸಿದ್ಧಪಡಿಸಿದ ಎಲ್ಲಾ ಸರಕುಗಳ ಮೇಲೆ ಎಂ.ಆರ್.ಪಿ ಲೇಬಲ್ ಕಡ್ಡಾಯಗೊಳಿಸಲಾಗಿದೆ.

ಮಧ್ಯರಾತ್ರಿ 12 ಗಂಟೆಯಿಂದ ಎಂ.ಆರ್.ಪಿ ನಮೂದಿಸದ ಯಾವುದೇ ಸರಕುಗಳಿಗೆ ಕಸ್ಟಮ್ಸ್ ಅನುಮತಿ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 6(3) ಪ್ರಕಾರ, ದೇಶೀಯ ಹಾಗೂ ಆಮದು ಸರಕುಗಳ ಮೇಲೆ ಎಂ.ಆರ್.ಪಿ ಅನ್ನು ನೇಪಾಳಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಜೊತೆಗೆ ತೂಕ ಅಥವಾ ಪ್ರಮಾಣ, ತಯಾರಿಕಾ ದಿನಾಂಕ, ಬ್ಯಾಚ್ ಸಂಖ್ಯೆ, ಬಳಕೆಯ ಕೊನೆಯ ದಿನಾಂಕ ಸೇರಿದಂತೆ ಅಗತ್ಯ ವಿವರಗಳನ್ನು ಲೇಬಲ್ ನಲ್ಲಿ ಸೇರಿಸಬೇಕು. ಎಲೆಕ್ಟ್ರಾನಿಕ್ ಮತ್ತು ಯಂತ್ರೋಪಕರಣಗಳಿಗೆ ಖಾತರಿ ಅವಧಿ ಹಾಗೂ ಅಪಾಯ ಸೂಚನೆ ಗಳೂ ಕಡ್ಡಾಯವಾಗಿವೆ. ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳ ಮೇಲೆ ಎಚ್ಚರಿಕೆ ಸಂದೇಶ ಅಥವಾ ಚಿತ್ರಗಳನ್ನು ಕೂಡ ಸೇರಿಸಬೇಕು.

ನಿಯಮ ಉಲ್ಲಂಘಿಸಿದರೆ ರೂ.3 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದ್ದು, ಇದರಿಂದ ವ್ಯಾಪಾರಿಗಳಲ್ಲಿ ಆತಂಕ ಹೆಚ್ಚಾಗಿದೆ.

ಗಡಿ ಭಾಗಗಳಲ್ಲಿ ವಾಹನಗಳ ಸಾಲು

ಬಿರ್ಗುಂಜ್, ಭೈರಹವಾ, ಬಿರಾಟನಗರ, ರಸುವಾ, ನೇಪಾಳಗಂಜ್ ಹಾಗೂ ಕಂಕಡಭಿಟ್ಟಾ ಕಸ್ಟಮ್ಸ್ ಚೆಕ್ಪೋಸ್ಟ್ಗಳಲ್ಲಿ ಮಾನದಂಡ ಪೂರೈಸದ ಸರಕುಗಳ ಕ್ಲಿಯರೆನ್ಸ್ ಸಂಪೂರ್ಣ ನಿಲ್ಲಿಸಲಾಗಿದೆ. ಪರಿಣಾಮವಾಗಿ, 1000ಕ್ಕೂ ಹೆಚ್ಚು ಸರಕು ವಾಹನಗಳು ಗಡಿಯಲ್ಲಿ ಸಿಲುಕಿಕೊಂಡಿವೆ. ಇವುಗಳಲ್ಲಿ ಸುಮಾರು 600 ಕಂಟೈನರ್ಗಳು ಬಿರ್ಗುಂಜ್ನಲ್ಲಿ ಮಾತ್ರ ನಿಂತಿವೆ. ಇತರ ಕೇಂದ್ರಗಳಲ್ಲಿ 20ರಿಂದ 100ರವರೆಗೆ ಕಂಟೈನರ್ಗಳು ತಡೆಗಟ್ಟಲ್ಪಟ್ಟಿವೆ.

ಚೀನಾದಿಂದ ಬಂದ ಬಟ್ಟೆ ಮತ್ತು ಪಾದರಕ್ಷೆಗಳ ಸುಮಾರು 20 ಕಂಟೈನರ್ಗಳು ರಸುವಾಗಧಿ ಚೆಕ್‌ ಪೋಸ್ಟ್‌ಗಳಲ್ಲಿ ತೆರವುಗಾಗಿ ಕಾಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗತ್ಯ ವಸ್ತುಗಳಿಗೆ ಮಾತ್ರ ವಿನಾಯಿತಿ

ಹಣ್ಣುಗಳು, ಹಸಿರು ತರಕಾರಿಗಳು, ಬೆಳ್ಳುಳ್ಳಿ, ಕಚ್ಚಾ ತಾಳೆ ಎಣ್ಣೆ, ಕೈಗಾರಿಕಾ ಕಚ್ಚಾ ವಸ್ತುಗಳು ಹಾಗೂ ಜಲವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದ ಯಂತ್ರೋಪಕರಣಗಳಿಗೆ ಮಾತ್ರ ಕಸ್ಟಮ್ಸ್ ಕ್ಲಿಯರೆನ್ಸ್ ಮುಂದುವರಿಸಲಾಗಿದೆ.

ಅಧಿಕಾರಿಗಳ ಪ್ರತಿಕ್ರಿಯೆ

ಬಿರ್ಗುಂಜ್ ಕಸ್ಟಮ್ಸ್ ಅಧಿಕಾರಿ ಉದಯ್ ಸಿಂಗ್ ಬಿಷ್ತ್ ಅವರು, “ಮೇಲಾಧಿಕಾರಿಗಳ ನಿರ್ದೇಶನದಂತೆ ಮಾನದಂಡ ಪೂರೈಸದ ಸರಕುಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಭೈರಹವಾ ಕಸ್ಟಮ್ಸ್ ಮುಖ್ಯಸ್ಥ ಹರಿಹರ್ ಪೌಡೆಲ್ ಅವರ ಪ್ರಕಾರ, ನಿಯಮಾನುಸಾರ ಎಂ.ಆರ್.ಪಿ ಹೊಂದಿರುವ ಸರಕುಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ.

ವ್ಯಾಪಾರಿಗಳ ಅಸಮಾಧಾನ

ಎಂ.ಆರ್.ಪಿ ಲೇಬಲ್ ಅನ್ನು ಕಸ್ಟಮ್ಸ್ಗೆ ತಲುಪಿದ ನಂತರ ಹೇಗೆ ಅಳವಡಿಸಬೇಕು ಎಂಬ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳ ಕೊರತೆಯಿಂದ ಆಮದುದಾರರು ಗೊಂದಲಕ್ಕೊಳಗಾಗಿದ್ದಾರೆ. ದಂಡದ ಭಯದಿಂದ ಕೆಲ ವ್ಯಾಪಾರಿಗಳು ಕಸ್ಟಮ್ಸ್ ಘೋಷಣೆ ಸಲ್ಲಿಸುವುದನ್ನೇ ತಪ್ಪಿಸುತ್ತಿದ್ದಾರೆ.

ಉದ್ಯಮ ವಲಯದ ಪ್ರತಿನಿಧಿಗಳು ನಿಯಮಕ್ಕೆ ವಿರೋಧವಿಲ್ಲ ಎಂದು ಹೇಳಿದರೂ, ಜಾರಿಗೆ ತರುವ ವಿಧಾನ ಪ್ರಾಯೋಗಿಕವಾಗಿರಬೇಕು ಎಂದು ಒತ್ತಾಯಿಸಿದ್ದಾರೆ. ಯಾವ ವಸ್ತುಗಳಿಗೆ ಎಂ.ಆರ್.ಪಿ ಕಡ್ಡಾಯ ಎಂಬುದನ್ನು ಸ್ಪಷ್ಟಪಡಿಸುವುದು ಹಾಗೂ ಗೋದಾಮು ಅಥವಾ ಮಾರಾಟದ ಹಂತದಲ್ಲಿ ಲೇಬಲ್ ಅಳವಡಿಸಲು ಅವಕಾಶ ನೀಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸರ್ಕಾರದ ನಿಲುವು

ಗ್ರಾಹಕರನ್ನು ವಂಚನೆಯಿಂದ ರಕ್ಷಿಸುವುದು ಹಾಗೂ ಮಾರುಕಟ್ಟೆ ಬೆಲೆಗಳನ್ನು ನಿಯಂತ್ರಿಸುವುದು ಈ ಕ್ರಮದ ಉದ್ದೇಶ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಯಾವುದೇ ಸಡಿಲಿಕೆ ಇಲ್ಲದೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಾಗಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande