
ನವದೆಹಲಿ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಘವ್ ಚಡ್ಡಾ ಅವರು ಆಮ್ ಆದ್ಮಿ ಪಕ್ಷದ ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮನ್ನು ರಾಜ್ಯ ಸಭೆಯ ಉಪ ನಾಯಕ ಸ್ಥಾನದಿಂದ ವಜಾಗೊಳಿಸಿರುವ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ಈ ವಿದ್ಯಮಾನದ ನಡುವೆಯೇ ಪಕ್ಷವು ಅವರ ಬದಲಿಗೆ ಅಶೋಕ ಮಿತ್ತಲ್ ಅವರನ್ನು ನೇಮಕ ಮಾಡುವಂತೆ ಶಿಫಾರಸು ಮಾಡಿದೆ.
ರಾಘವ್ ಚಡ್ಡಾ ಬಿಡುಗಡೆ ಮಾಡಿದ ವಿಡಿಯೋದಲ್ಲಿ, “ನನ್ನನ್ನು ಮೌನಗೊಳಿಸಲಾಗಿದೆ, ಆದರೆ ನಾನು ಸೋತಿಲ್ಲ. ನನಗೆ ಅವಕಾಶ ಸಿಕ್ಕಾಗಲೆಲ್ಲಾ ಸಾಮಾನ್ಯ ಜನರ ಸಮಸ್ಯೆಗಳನ್ನು ಎತ್ತುತ್ತೇನೆ” ಎಂದು ಹೇಳಿದ್ದಾರೆ. ಸಂಸತ್ತಿನಲ್ಲಿ ಜನಸಾಮಾನ್ಯರ ಪರವಾಗಿ ಮಾತನಾಡುವುದು ಅಪರಾಧವೇ ಎಂದು ಅವರು ಪ್ರಶ್ನಿಸಿದ್ದಾರೆ.
ಪಕ್ಷದ ಒಳಗಡೆ ನಡೆಯುತ್ತಿರುವ ವಿದ್ಯಮಾನದ ಬಗ್ಗೆ ಮಾತನಾಡಿದ ಚಡ್ಡಾ, “ನಾನು ಯಾವ ತಪ್ಪು ಮಾಡಿದ್ದೇನೆ? ನನಗೆ ಮಾತನಾಡಲು ಅವಕಾಶ ನೀಡಬಾರದು ಎಂದು ಏಕೆ ಹೇಳಲಾಗುತ್ತಿದೆ?” ಎಂದು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಸಂಸತ್ತಿನಲ್ಲಿ ವಿಮಾನ ನಿಲ್ದಾಣಗಳಲ್ಲಿ ದುಬಾರಿ ಆಹಾರ, ಟೋಲ್ ಶುಲ್ಕ, ಬ್ಯಾಂಕ್ ದಂಧೆಗಳು ಹಾಗೂ ಟೆಲಿಕಾಂ ಕಂಪನಿಗಳ ನೀತಿಗಳ ವಿರುದ್ಧ ತಾವು ಧ್ವನಿ ಎತ್ತಿದ್ದಾಗಿ ಅವರು ತಿಳಿಸಿದ್ದಾರೆ.
2024ರ ಪಂಜಾಬ್ ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ಎಎಪಿಯ ಪ್ರಮುಖ ಮುಖವಾಗಿದ್ದ ಚಡ್ಡಾ, ಇತ್ತೀಚಿನ ದಿನಗಳಲ್ಲಿ ಪಂಜಾಬ್ ರಾಜಕೀಯದಿಂದ ದೂರ ಉಳಿದಿದ್ದರು. ಈ ಹಿನ್ನೆಲೆ ಪಕ್ಷದ ನಿರ್ಧಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
“ನನ್ನ ಧ್ವನಿಯನ್ನು ಅಡಗಿಸಲು ಯತ್ನಿಸುವವರಿಗೆ ಹೇಳಬೇಕೆಂದರೆ, ನನ್ನ ಮೌನವನ್ನು ಸೋಲು ಎಂದು ತಪ್ಪಾಗಿ ಭಾವಿಸಬೇಡಿ. ಸಮಯ ಬಂದಾಗ ಪ್ರವಾಹವಾಗುವ ನದಿ ನಾನು,” ಎಂದು ಚಡ್ಡಾ ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa