
ಹುಬ್ಬಳ್ಳಿ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಕಲಚೇತನರ ಜೀವನದಲ್ಲಿ ಹೊಸ ಬೆಳಕು ಮೂಡಿಸುತ್ತಾ, ಕೃತಕ ಕೈ-ಕಾಲು ಜೋಡಣೆ ಸೇವೆಯಲ್ಲಿ ಮೌನ ಕ್ರಾಂತಿ ಸಾಧಿಸಿರುವ ಆಲ್ ಇಂಡಿಯಾ ಜೈನ್ ಯೂತ್ ಫೆಡರೇಶನ್ನ ಮಹಾವೀರ ಲಿಂಬ್ ಸೆಂಟರ್ ತನ್ನ ಸೇವೆಯ 30ನೇ ವರ್ಷ ಪೂರೈಸಿದ ಸಂಭ್ರಮವನ್ನು ನಾಳೆ “ಸ್ಥಾಪನಾ ವರ್ಷ–ಸ್ವಾಭಿಮಾನ ದಿವಸ”ವಾಗಿ ಆಚರಿಸಲಿದೆ.
ಹುಬ್ಬಳ್ಳಿ ಕಿಮ್ಸ್ ಪ್ರಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಲಿಂಬ್ ಸೆಂಟರ್, ಕಳೆದ ಮೂರು ದಶಕಗಳಿಂದ ಸಾವಿರಾರು ವಿಕಲಚೇತನರಿಗೆ ಉಚಿತವಾಗಿ ಕೃತಕ ಅಂಗಗಳನ್ನು ಒದಗಿಸಿ, ಅವರ ಜೀವನದಲ್ಲಿ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ತುಂಬುವ ಮಹತ್ವದ ಸೇವೆ ಸಲ್ಲಿಸಿದೆ.
ಈ ಸಂಭ್ರಮಾಚರಣೆ ಕಾರ್ಯಕ್ರಮವು ನಾಳೆ ಬೆಳಿಗ್ಗೆ 9 ಗಂಟೆಗೆ ನಗರದ ಕೇಶ್ವಾಪುರದ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಉದ್ಘಾಟಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಸಚಿವ ಎಚ್.ಸಿ. ಮಹದೇವಪ್ಪ, ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾಷ್ಟ್ರಸಂತ ಆಚಾರ್ಯ ವಿಮಲಸಾಗರ ಸುರೀಶ್ವರಜಿ ಹಾಗೂ ಪದ್ಮವಿಮಲಸಾಗರಜಿ ಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ. ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸೆಂಟರ್ ಅಧ್ಯಕ್ಷ ಗೌತಮ್ ಗುಲೇಚಾ ಹಾಗೂ ಕಾರ್ಯಕ್ರಮ ಸಮಿತಿಯ ಸುಭಾಸ್ ಡಂಕ ಪ್ರಕಟಣೆಯಲ್ಲಿ ತಿಳಿಸಿರುವಂತೆ, ಈ ಕಾರ್ಯಕ್ರಮವು ವಿಕಲಚೇತನರ ಸ್ವಾಭಿಮಾನ, ಸಾಧನೆ ಹಾಗೂ ಸಮಾಜದ ಬೆಂಬಲವನ್ನು ಪ್ರತಿಬಿಂಬಿಸುವ ವೇದಿಕೆಯಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa