ಜೆಇ ವೀರೇಶ್ ಮೇಲೆ ಕಾಂಗ್ರೆಸ್ ಕಾರ್ಪೊರೇಟರ್ ಹಲ್ಲೆ
ಎಂಜಿನಿಯರ್
ಜೆಇ ವೀರೇಶ್ ಮೇಲೆ ಕಾಂಗ್ರೆಸ್ ಕಾರ್ಪೊರೇಟರ್ ಹಲ್ಲೆ ; ಆಘಾತ


ಬಳ್ಳಾರಿ, 03 ಏಪ್ರಿಲ್ (ಹಿ.ಸ.) ;

ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆಯ ಜ್ಯೂನಿಯರ್ ಎಂಜಿನಿಯರ್ ಮೇಲೆ ಕಾಂಗ್ರೆಸ್ ಕಾರ್ಪೊರೇಟರ್ ವಿನಾಕಾರಣ ಹಲ್ಲೆ ನಡೆಸಿ, ಬೆದರಿಕೆ ಹಾಕಿರುವ ಘಟನೆ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ದೇವೀನಗರದ ಹುಲಿಗೆಮ್ಮ ದೇವಸ್ಥಾನದ ಸಮೀಪ ನಡೆದಿದೆ. ಹಲ್ಲೆಯಿಂದ ಆಘಾತಕ್ಕೆ ಒಳಗಾಗಿರುವ ಜ್ಯೂನಿಯರ್ ಎಂಜಿನಿಯರ್ ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆಯ ಜ್ಯೂನಿಯರ್ ಎಂಜಿನಿಯರ್ ಆಗಿರುವ ಜಿ.ಎಂ. ವೀರೇಶ್ ಅವರು ಶುಕ್ರವಾರ ಬೆಳಗ್ಗೆಯಿಂದಲೂ ಹುಲಿಗೆಮ್ಮ ಗುಡಿ ಮುಂಭಾಗದಲ್ಲಿ ಕೆಲಸ ಮಾಡಿಸುತ್ತಿದ್ದಾಗ, ಅಲ್ಲಿಗೆ ಬಂದ 32ನೇ ವಾರ್ಡ್ನ ಕಾಂಗ್ರೆಸ್ ಕಾರ್ಪೊರೇಟರ್ ವಿ. ಕುಬೇರ ಮತ್ತು ಆತನ ಬೆಂಬಲಿಗರು, ತಮ್ಮ ವಾರ್ಡ್ನಲ್ಲಿಯ ಕೆಲಸವನ್ನು ಈ ಕ್ಷಣವೇ ಪ್ರಾರಂಭಿಸಿ, ಪೂರ್ಣಗೊಳಿಸಬೇಕು ಎಂದು ಒತ್ತಡ ಹೇರಿದ್ದಾರೆ.

ಜ್ಯೂನಿಯರ್ ಎಂಜಿನಿಯರ್ ಅವರು, ಇಂದು ಗುಡ್ಫ್ರೈಡೇ ಇದೆ. ರಜಾ ದಿನ. ಕೆಲಸದವರು ಸಿಗುವುದು ಕಷ್ಟ. ಇರುವ ಕೆಲಸಗಾರರನ್ನೇ ಓಲೈಸಿ ಕೆಲಸ ಮಾಡಿಸಬೇಕಿದೆ. ಶನಿವಾರ ಬೆಳಗ್ಗೆ ನಿಮ್ಮ ವಾರ್ಡ್ನಲ್ಲಿರುವ ಕೆಲಸವನ್ನು ಪ್ರಾರಂಭಿಸಿ, ತ್ವರಿತವಾಗಿ ಪೂರ್ಣಗೊಳಿಸುವುದಾಗಿ ಪರಿಪರಿಯಾಗಿ ಬೇಡಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ, ಕಾಂಗ್ರೆಸ್ ಕಾರ್ಪೊರೇಟರ್ ವಿ. ಕುಬೇರ ಮತ್ತು ಅವರ ಬೆಂಬಲಿಗರು, ಈ ಕ್ಷಣವೇ ಕಾಮಗಾರಿ ಪ್ರಾರಂಭಿಸಬೇಕು. ಹಾಲಿ ನಡೆಸುತ್ತಿರುವ ಕೆಲಸವನ್ನು ಅರ್ಧಕ್ಕೇ ಕೈಬಿಡಬೇಕು ಎಂದು ಜ್ಯೂನಿಯರ್ ಎಂಜಿನಿಯರ್ ಅವರ ಮೇಲೆ ಒತ್ತಡ ಹೇರಿದ್ದಾರೆ.

ಆಗ, ಜ್ಯೂನಿಯರ್ ಎಂಜಿನಿಯರ್ ಅವರು ವಸ್ತುಸ್ಥಿತಿಯನ್ನು ಎಷ್ಟೇ ವಿವರಿಸಿ ಹೇಳಿದರೂ, ಕಾರ್ಪೊರೇಟರ್ ವಿ. ಕುಬೇರ ಅವರು ಜೆಇ ವಿರುದ್ಧ ಏರುಧ್ವನಿಯಲ್ಲಿ ಬೆದರಿಕೆ ಹಾಕುತ್ತ, ಏಕಾಏಕಿ ಹಲ್ಲೆ ಮಾಡಿದ್ದಾರೆ. ಆಗ, ಅವರ ಬೆಂಬಲಿಗೂ ಜೆಇ ಮೇಲೆ ಹಲ್ಲೆ ನಡೆಸಿ, ಮಾನಸಿಕ ಆಘಾತಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ಜೆಇ ಜಿ.ಎಂ. ವೀರೇಶ್ ಅವರು ಮೇಲಧಿಕಾರಿಗಳ ಗಮನಕ್ಕೆ ತಂದು, ಆಪ್ತರ ನೆರವನ್ನು ಪಡೆದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೆಇ ವೀರೇಶ್ ಅವರು ಹಲ್ಲೆ ಮತ್ತು ಬೆದರಿಕೆಯಿಂದಾಗಿ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರಾದ ಪಿ.ಎಸ್. ಮಂಜುನಾಥ್ ಅವರು, ಜೆಇ ವೀರೇಶ್ ಜಿ.ಎಂ. ಅವರ ಮೇಲೆ 32ನೇ ವಾರ್ಡ್ನ ಕಾರ್ಪೊರೇಟರ್ ವಿ. ಕುಬೇರ ಮತ್ತು ಅವರ ಬೆಂಬಲಿಗರು ವಿನಾಕಾರಣ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆ. ವೀರೇಶ್ ಅವರು ಆಘಾತಕ್ಕೆ ಒಳಗಾಗಿದ್ದಾರೆ. ಘಟನೆ ಕುರಿತು ಬ್ರೂಸ್ಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಾಗುವ ಹಂತದಲ್ಲಿದೆ ಎಂದು ತಿಳಿಸಿದರು.

ಖಂಡನೀಯ

ಜೆಇ ವೀರೇಶ ಅವರ ಮೇಲಿನ ಹಲ್ಲೆಯನ್ನು ಬಳ್ಳಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ಸಿಗರು ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ವಿನಾಕಾರಣ ಹಲ್ಲೆ ನಡೆಸುವುದು, ಬೆದರಿಕೆ ಹಾಕುವುದು ಸಾಮಾನ್ಯವಾಗುತ್ತಿದೆ. ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುವುದು ಆತಂಕಕಾರಿಯಾಗುತ್ತಿದೆ. ಜೆಇ ಜಿ.ಎಂ. ವೀರೇಶ್ ಮೇಲಿನ ಹಲ್ಲೆ ಪ್ರಕರಣದಲ್ಲಿ ತಪ್ಪಿತಸ್ತರು ಯಾರೇ ಇರಲಿ ಅವರನ್ನು ಕಠಿಣವಾಗಿ ಶಿಕ್ಷಿಸಬೇಕು. ಸರ್ಕಾರ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande