
ಗದಗ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಚನ್ನಪಟ್ಟಣ ಗ್ರಾಮದಲ್ಲಿ ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಕೊರತೆಯಿಂದ ಹಾಳಾಗಿ ಬಿದ್ದಿದೆ.
ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಸ್ಥಾಪಿಸಲಾದ ಈ ಘಟಕ ಈಗ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದು, ಸಾರ್ವಜನಿಕ ಹಣ ವ್ಯರ್ಥವಾಗುತ್ತಿರುವುದು ಗ್ರಾಮಸ್ಥರಲ್ಲಿ ಅಸಮಾಧಾನ ಮೂಡಿಸಿದೆ.
ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಕುಡಿಯುವ ನೀರು ದೊರಕಬೇಕು ಎಂಬ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆಗಳ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಆದರೆ ಚನ್ನಪಟ್ಟಣ ಗ್ರಾಮದಲ್ಲಿ ಸ್ಥಾಪಿಸಲಾದ ಘಟಕ ಆರಂಭದಲ್ಲಿ ಕೆಲಕಾಲ ಮಾತ್ರ ಕಾರ್ಯನಿರ್ವಹಿಸಿ, ನಂತರ ಸೂಕ್ತ ನಿರ್ವಹಣೆ ಇಲ್ಲದೆ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ ಎಂದು ಗ್ರಾಮದ ಹಿರಿಯರು ನಾಗಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಘಟಕದಲ್ಲಿನ ಯಂತ್ರೋಪಕರಣಗಳು ನಿರಂತರ ಬಳಕೆಯ ಕೊರತೆಯಿಂದ ಧೂಳು ಹಿಡಿದು ಹಾಳಾಗುತ್ತಿದ್ದು, ಕೆಲ ಭಾಗಗಳು ದುರಸ್ತಿ ಸಾಧ್ಯವಾಗದ ಮಟ್ಟಿಗೆ ಹಾನಿಗೊಳಗಾಗಿವೆ. ನೀರಿನ ಶುದ್ಧೀಕರಣ ವ್ಯವಸ್ಥೆ ಕಾರ್ಯನಿರ್ವಹಿಸದ ಕಾರಣ ಗ್ರಾಮಸ್ಥರು ಮತ್ತೆ ಅಶುದ್ಧ ನೀರಿನ ಮೇಲೆಯೇ ಅವಲಂಬಿತರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಾರ್ವಜನಿಕರ ಆರೋಗ್ಯದ ಪ್ರಶ್ನೆಯೇ ಇದ್ದರೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ವಿಷಾದನೀಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ಸಂಬಂಧಪಟ್ಟ ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಹಾಳಾಗಿ ಬಿದ್ದಿರುವ ಶುದ್ಧ ನೀರಿನ ಘಟಕವನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗುವ ಸಾಧ್ಯತೆ ಇದೆ.
ಒಟ್ಟಾರೆ, ಸರ್ಕಾರದ ಲಕ್ಷಾಂತರ ರೂಪಾಯಿ ಹಣದಿಂದ ನಿರ್ಮಿತವಾದ ಮೂಲಸೌಕರ್ಯವೇ ನಿರ್ಲಕ್ಷ್ಯದಿಂದ ಹಾಳಾಗುತ್ತಿರುವುದು ಆಡಳಿತ ವ್ಯವಸ್ಥೆಯ ದೌರ್ಬಲ್ಯವನ್ನು ಎತ್ತಿಹಿಡಿಯುತ್ತಿದ್ದು, ಜನಸಾಮಾನ್ಯರ ಹಿತಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯ ಸ್ಪಷ್ಟವಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP