
ನವದೆಹಲಿ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ಜನಗಣತಿ-2027ರ ಅಂಗವಾಗಿ ಸ್ವಯಂ ಗಣತಿ ಅಭಿಯಾನದಲ್ಲಿ ಭಾಗವಹಿಸಿ, ತಮ್ಮ ಕುಟುಂಬದ ವಿವರಗಳನ್ನು ಆನ್ಲೈನ್ ಪೋರ್ಟಲ್ನಲ್ಲಿ ಸ್ವತಃ ನೋಂದಾಯಿಸಿಕೊಂಡರು. ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಅವರು, ದೇಶದ ನಾಗರಿಕರು ಈ ಮಹತ್ವದ ರಾಷ್ಟ್ರೀಯ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಬಿರ್ಲಾ ಅವರು ತಮ್ಮ ಪೋಸ್ಟ್ನಲ್ಲಿ, 2027ರ ಜನಗಣತಿಯ ಮೊದಲ ಹಂತ ಆರಂಭಗೊಂಡಿದ್ದು, ದೆಹಲಿಯ ತಮ್ಮ ನಿವಾಸದಲ್ಲೇ ಸ್ವಯಂ ಗಣತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾಗಿ ತಿಳಿಸಿದ್ದಾರೆ. ಈ ಪ್ರಕ್ರಿಯೆಯನ್ನು “ಹೊಸ ಯುಗದ ಆರಂಭ” ಎಂದು ವಿವರಿಸಿದ ಅವರು, ಮೊದಲ ಬಾರಿಗೆ ಜನಗಣತಿಯನ್ನು ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಸಲಾಗುತ್ತಿದೆ ಎಂದರು.
ಈ ಬಾರಿ ಜನಗಣತಿಯನ್ನು ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ನಾಗರಿಕರು ಅಧಿಕೃತ ಪೋರ್ಟಲ್ ಮೂಲಕ ತಮ್ಮದೇ ಮಾಹಿತಿಯನ್ನು ನಮೂದಿಸಬಹುದಾಗಿದೆ. ಗೃಹ ಸಚಿವಾಲಯದ ಪ್ರಕಾರ, ಮೊದಲ ಹಂತವಾದ ‘ಮನೆಪಟ್ಟಿ ಮತ್ತು ವಸತಿ ಗಣತಿ’ ಏಪ್ರಿಲ್ 1ರಿಂದ ಸೆಪ್ಟೆಂಬರ್ 30, 2026ರವರೆಗೆ ನಡೆಯಲಿದೆ. ಈ ಹಂತದಲ್ಲಿ ಮನೆಗಳ ಸ್ಥಿತಿ, ಸೌಲಭ್ಯಗಳು ಮತ್ತು ಮೂಲಸೌಕರ್ಯಗಳಿಗೆ ಸಂಬಂಧಿಸಿದ 33 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ.
ಪ್ರಾರಂಭಿಕ ಹಂತದಲ್ಲಿ ಅಂಡಮಾನ್-ನಿಕೋಬಾರ್ ದ್ವೀಪಗಳು, ಗೋವಾ, ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ವಯಂ ಗಣತಿ ಸೌಲಭ್ಯ ಆರಂಭಿಸಲಾಗಿದೆ. ಈ ಡಿಜಿಟಲ್ ವ್ಯವಸ್ಥೆ 16 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದ್ದು, ಗೂಢಲಿಪೀಕರಣ (ಎನ್ಕ್ರಿಪ್ಷನ್) ಮತ್ತು ಬಹುಪದರ ದೃಢೀಕರಣದಂತಹ ಭದ್ರತಾ ಕ್ರಮಗಳನ್ನು ಒಳಗೊಂಡಿದೆ.
ಸ್ವಯಂ ಗಣತಿಯನ್ನು ಪೂರ್ಣಗೊಳಿಸಿದ ನಂತರ ನಾಗರಿಕರಿಗೆ ವಿಶಿಷ್ಟ ಐಡಿ ನೀಡಲಾಗುತ್ತದೆ. ಡಿಜಿಟಲ್ ವ್ಯವಸ್ಥೆಯ ಜೊತೆಗೆ ಸಾಂಪ್ರದಾಯಿಕ ಮನೆ-ಮನೆ ಸಮೀಕ್ಷೆಯೂ ಮುಂದುವರಿಯಲಿದೆ. ಮನೆ ಸಮೀಕ್ಷೆಗೆ ಮುನ್ನ ಸ್ವಯಂ ಗಣತಿಗೆ ಹೆಚ್ಚುವರಿ 15 ದಿನಗಳಾವಕಾಶ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa