

ಬಳ್ಳಾರಿ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನಿಮ್ಮೊಂದಿಗೆ ನಾವಿದ್ದೇವೆ (ಬಿಜೆಪಿ). ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೇ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ತಿಳಿಸಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆಯ ಎಂಜಿನಿಯರ್ ಜಿ.ಎಂ. ವೀರೇಶ್ ಮೇಲಿನ ಹಲ್ಲೆಯನ್ನು ಖಂಡಿಸಿ ಪಾಲಿಕೆಯ ಸಿಬ್ಬಂದಿ - ಅಧಿಕಾರಿಗಳು ಪಾಲಿಕೆಯ ಮುಂದೆ ಶುಕ್ರವಾರ ಸಂಜೆಯಿಂದ ಪ್ರಾರಂಭಿಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಪದೇ ಪದೇ ಏನಾದರೂ ಒಂದು ಗಲಭೆ ನಡೆಯುತ್ತಿರುವುದು ವಿಷಾದನೀಯ. ಈ ಗಲಭೆಗಳು - ವಿವಾದಗಳಿಂದ ಬಳ್ಳಾರಿ ನಗರಕ್ಕೇ ಕಪ್ಪು ಚುಕ್ಕೆ. ಇನ್ನು ಮುಂದಾದರೂ ಇಂಥಹಾ ಗಲಭೆಗಳನ್ನು - ವಿವಾದಗಳನ್ನು ಆಡಳಿತ ಪಕ್ಷದ ಜನಪ್ರತಿನಿಧಿಗಳು ತಡೆಗಟ್ಟಬೇಕು ಎಂದರು.
ಅಧಿಕಾರಿಗಳು ಮತ್ತು ಕಾರ್ಪೊರೇಟರುಗಳ ಮಧ್ಯೆ ಏನಾದರೂ ವಿವಾದಗಳಿದ್ದಲ್ಲಿ - ಭಿನ್ನಾಭಿಪ್ರಾಯಗಳಿದ್ದಲ್ಲಿ ಮೇಲಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ವಿವಾದವನ್ನು ಪರಿಹರಿಸಿಕೊಳ್ಳಬೇಕು. ಅಲ್ಲದೇ, ಸರ್ಕಾರಿ ನೌಕರರ ಜೊತೆಯಲ್ಲಿ ಸೌಹಾರ್ದಯುತವಾಗಿ ಇರಬೇಕು. ಸರ್ಕಾರಿ ನೌಕರರ ಜೊತೆಯಲ್ಲಿ ಜನಪ್ರತಿನಿಧಿಗಳ ಸಂಬಂಧಗಳು ಕೆಟ್ಟದಲ್ಲಿ ಅಭಿವೃದ್ಧಿ, ಪ್ರಗತಿ ಮತ್ತು ಜನಪರ ಆಡಳಿತ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇಂಜಿನಿಯರ್ ಜಿ.ಎಂ. ವೀರೇಶ್ ಅವರ ಮೇಲೆ ಹಲ್ಲೆ ಮಾಡಿರುವ ಕಾಂಗ್ರೆಸ್ ಕಾರ್ಪೊರೇಟರ್ ವಿ. ಕುಬೇರ ಅವರನ್ನು ಪೊಲೀಸರು ಬಂಧಿಸಬೇಕು. ಇಲ್ಲವಾದಲ್ಲಿ ಬಿಜೆಪಿಯು ಹಂತ ಹಂತವಾಗಿ ಉಗ್ರ ಪ್ರತಿಭಟನೆ ನಡೆಸಲಿದೆ. ನಾವು (ಬಿಜೆಪಿ) ಸದಾಕಾಲ ಸರ್ಕಾರಿ ಅಧಿಕಾರಿಗಳು - ಸಿಬ್ಬಂದಿಗಳ ಜೊತೆ ಇರಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಖಂಡನೆ
ಬಳ್ಳಾರಿ ಮಹಾನಗರ ಪಾಲಿಕೆಯ ಎಂಜಿನಿಯರ್ ಜಿ.ಎಂ. ವೀರೇಶ್ ಅವರ ಮೇಲೆ ಕಾಪೆರ್Çರೇಟರ್ ವಿ. ಕುಬೇರ ಅವರು ಹಲ್ಲೆ ಮಾಡಿ, ಬೆದರಿಕೆ ಹಾಕಿರುವುದನ್ನು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘವು ತೀವ್ರವಾಗಿ ಖಂಡಿಸಿದೆ. ಹಲ್ಲೆ ನಡೆಸಿದವರನ್ನು ಜಿಲ್ಲಾ ಪೊಲೀಸ್ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಎಸ್.ಎಂ. ವೀರಭದ್ರಯ್ಯ ಅವರು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್