
ಗುವಾಹಟಿ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಅಸ್ಸಾಂ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಪ್ರಚಾರವನ್ನು ತೀವ್ರಗೊಳಿಸಿದೆ. ಪಕ್ಷದ ಹಲವಾರು ಹಿರಿಯ ನಾಯಕರು ರಾಜ್ಯದ ನಾನಾ ಭಾಗಗಳಲ್ಲಿ ಇಂದು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಇಂದು ಮತ್ತೆ ಅಸ್ಸಾಂಗೆ ಆಗಮಿಸುತ್ತಿದ್ದು, ಕಮಲಪುರ, ಮಂಗಲ್ಡೈ ಹಾಗೂ ನ್ಯೂ ಗುವಾಹಟಿಯಲ್ಲಿ ಪಕ್ಷ ಮತ್ತು ಎನ್ಡಿಎ ಬೆಂಬಲಿತ ಅಭ್ಯರ್ಥಿಗಳ ಪರ ಭರ್ಜರಿ ರ‍್ಯಾಲಿಗಳನ್ನು ನಡೆಸಲಿದ್ದಾರೆ.
ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಕೂಡ ಅಸ್ಸಾಂ ಪ್ರವಾಸದಲ್ಲಿದ್ದು, ಅಪ್ಪರ್ ಅಸ್ಸಾಂನ ನಹರ್ಕಟಿಯಾ ಹಾಗೂ ಟಿನ್ಸುಕಿಯಾ ಜಿಲ್ಲೆಯ ಟಿಂಗ್ಖಾಂಗ್ ಪ್ರದೇಶಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಾರ್ಪೇಟಾ ಮತ್ತು ಬಾರ್ಸೋಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇನ್ನೊಂದೆಡೆ, ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಭೇಟಿಯ ಎರಡನೇ ದಿನ ಗೋಲಕ್ಗಂಜ್, ದುಧ್ನೈ ಹಾಗೂ ಪಲಾಶ್ಬರಿಯಲ್ಲಿ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರತಿ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೂಡ ತನ್ನ ಪ್ರಚಾರ ಚಟುವಟಿಕೆಗಳನ್ನು ವೇಗಗೊಳಿಸಿದೆ. ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಇಂದು ಹಲವು ಚುನಾವಣಾ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಇದಲ್ಲದೆ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಬೆಂಬಲಿಸಿ ಅಸ್ಸಾಂನ ನಾನಾ ಭಾಗಗಳಲ್ಲಿ ಚುನಾವಣಾ ರ‍್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa