
ಲಕ್ನೋ, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಉತ್ತರ ಪ್ರದೇಶದ ಅತಿ ಉದ್ದದ ಗಂಗಾ ಎಕ್ಸ್‌ಪ್ರೆಸ್ ವೇಯನ್ನು ಬುಧವಾರ ಉದ್ಘಾಟಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, “ಗಂಗಾ ನದಿ ದೇಶದ ಜೀವನಾಡಿಯಾಗಿರುವಂತೆ, ಈ ಗಂಗಾ ಎಕ್ಸ್ಪ್ರೆಸ್ ವೇ ರಾಜ್ಯದ ಅಭಿವೃದ್ಧಿಯ ಹೊಸ ಜೀವನಾಡಿಯಾಗಲಿದೆ” ಎಂದು ಹೇಳಿದರು.
ಹರ್ದೋಯಿ ಜಿಲ್ಲೆಯಲ್ಲಿ ನಡೆದ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಗಂಗಾ ಮಾತೆಯ ಹೆಸರಿನಲ್ಲಿ ನಿರ್ಮಿಸಲಾದ ಈ ಎಕ್ಸ್‌ಪ್ರೆಸ್ ವೇ ಪರಂಪರೆ ಮತ್ತು ಅಭಿವೃದ್ಧಿಯ ಸಮನ್ವಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಈ ಯೋಜನೆಗಾಗಿ ಉತ್ತರ ಪ್ರದೇಶದ ಜನತೆಗೆ ಅಭಿನಂದನೆ ಸಲ್ಲಿಸಿದರು.
ಪ್ರಧಾನಿ ಮೋದಿ ಮಾತನಾಡುತ್ತ, ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡಲಾಗುತ್ತಿದೆ ಎಂದು ತಿಳಿಸಿದರು.
2021ರಲ್ಲಿ ಶಾಹಜಹಾನ್ಪುರದಲ್ಲಿ ಶಂಕುಸ್ಥಾಪನೆಗೊಂಡ ಈ ಮಹತ್ವಾಕಾಂಕ್ಷಿ ಯೋಜನೆ ಐದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಪೂರ್ಣಗೊಂಡಿರುವುದು ಗಮನಾರ್ಹ ಸಾಧನೆ ಎಂದು ಹೇಳಿದರು. ಈಗಾಗಲೇ ಈ ಎಕ್ಸ್‌ಪ್ರೆಸ್ ವೇ ವಿಸ್ತರಣೆ ಯೋಜನೆಯೂ ಆರಂಭವಾಗಿದ್ದು, ಶೀಘ್ರದಲ್ಲೇ ಮೀರತ್ನಿಂದ ಹರಿದ್ವಾರವರೆಗೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಘೋಷಿಸಿದರು.
ರಾಜ್ಯದಲ್ಲಿ ಉತ್ತಮ ರಸ್ತೆ ಸಂಪರ್ಕದಿಂದ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ಸಿಗಲಿದ್ದು, 12 ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್ಗಳ ಅಭಿವೃದ್ಧಿ ಸಾಧ್ಯವಾಗಲಿದೆ. ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ದೊಡ್ಡ ಮಾರುಕಟ್ಟೆಗಳಿಗೆ ತಲುಪಿಸಲು ಸಾಧ್ಯವಾಗುತ್ತದೆ ಹಾಗೂ ಲಕ್ಷಾಂತರ ಕುಟುಂಬಗಳ ಆದಾಯ ಹೆಚ್ಚಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಹೂಡಿಕೆಗಳು ಹೆಚ್ಚುತ್ತಿರುವುದರಿಂದ ಉತ್ತರ ಪ್ರದೇಶ ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ವೇಗವಾಗಿ ಸಾಗುತ್ತಿದೆ ಎಂದೂ ಹೇಳಿದರು.
ಭಾರತದಲ್ಲಿ ತಯಾರಾಗುವ ಮೊಬೈಲ್ಗಳಲ್ಲಿನ ದೊಡ್ಡ ಭಾಗವನ್ನು ಉತ್ತರ ಪ್ರದೇಶವೇ ಉತ್ಪಾದಿಸುತ್ತಿದ್ದು, ರಕ್ಷಣಾ ಉತ್ಪಾದನೆಯಲ್ಲಿಯೂ ರಾಜ್ಯ ಮಹತ್ವದ ಪಾತ್ರವಹಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa