
ಲೆಬನಾನ್, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ದಕ್ಷಿಣ ಲೆಬನಾನ್ ಪ್ರದೇಶದಲ್ಲಿ ನಡೆಸಿದ ಭಾರಿ ಸೈನಿಕ ಕಾರ್ಯಾಚರಣೆಯಲ್ಲಿ, ಹೆಜ್ಬೊಲ್ಲಾ ಸಂಘಟನೆಯ ದೊಡ್ಡ ಭೂಗರ್ಭ ಸುರಂಗವನ್ನು ಸ್ಫೋಟಿಸಿ ಧ್ವಂಸ ಮಾಡಲಾಗಿದೆ. ಈ ದಾಳಿಯಲ್ಲಿ ಹಲವು ಉಗ್ರರು ಹತರಾಗಿರುವುದಾಗಿ ವರದಿಯಾಗಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಕಾರ್ಯಾಚರಣೆಯನ್ನು ದೃಢಪಡಿಸಿದ್ದು, ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. “ನಾವು ಹೆಜ್ಬೊಲ್ಲಾದ ಮಹತ್ತರ ಸುರಂಗವೊಂದನ್ನು ಧ್ವಂಸ ಮಾಡಿದ್ದೇವೆ. ಅವರ ಭಯೋತ್ಪಾದಕ ಮೂಲಸೌಕರ್ಯವನ್ನು ಕ್ರಮಬದ್ಧವಾಗಿ ನಾಶಪಡಿಸುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ.
ಐಡಿಎಫ್ ನೀಡಿರುವ ಮಾಹಿತಿ ಪ್ರಕಾರ, ಸುಮಾರು 2 ಕಿಲೋಮೀಟರ್ ಉದ್ದದ ಈ ಸುರಂಗವು ದಕ್ಷಿಣ ಲೆಬನಾನ್ ಕ್ವಾಂಟರಾ ಪ್ರದೇಶದಲ್ಲಿ ನೆಲದಿಂದ 25 ಮೀಟರ್ ಆಳದಲ್ಲಿ ನಿರ್ಮಿಸಲ್ಪಟ್ಟಿತ್ತು. ಈ ಸುರಂಗವನ್ನು ಇರಾನ್ ಸಹಾಯದಿಂದ ನಿರ್ಮಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಸುಮಾರು 450 ಟನ್ ಸ್ಫೋಟಕಗಳನ್ನು ಬಳಸಿ ಮಂಗಳವಾರ ಈ ಸುರಂಗವನ್ನು ಸ್ಫೋಟಿಸಿ ಧ್ವಂಸ ಮಾಡಲಾಗಿದೆ. ಗ್ರಾನೈಟ್ ಕಲ್ಲಿನಲ್ಲಿ ಅಗೆದು ನಿರ್ಮಿಸಲಾದ ಈ ಸುರಂಗದಲ್ಲಿ ಸುಮಾರು 30 ಕೊಠಡಿಗಳಿದ್ದು, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಡಗಿಸಿಡಲಾಗಿತ್ತು ಎಂದು ಐಡಿಎಫ್ ತಿಳಿಸಿದೆ. ಸುರಂಗದ ರಕ್ಷಣೆಗೆ ನಿಯೋಜಿಸಲಾಗಿದ್ದ ಉಗ್ರರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಇದರ ನಡುವೆ, ಹೆಜ್ಬೊಲ್ಲಾ ಕೂಡ ಪ್ರತಿದಾಳಿಯಾಗಿ ದಕ್ಷಿಣ ಲೆಬನಾನ್ ನಲ್ಲಿ ಇಸ್ರೇಲಿ ಪಡೆಗಳ ಮೇಲೆ ಡ್ರೋನ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ರಕ್ಷಣಾ ಸಚಿವಾಲಯದ ನಾಗರಿಕ ಗುತ್ತಿಗೆದಾರ ಅಮೀರ್ ಹುಜಿರತ್ ಮೃತಪಟ್ಟಿದ್ದು, ಅವರ ಪುತ್ರ ಗಾಯಗೊಂಡಿದ್ದಾನೆ. ಒಂದು ದಿನ ಮೊದಲು ನಡೆದ ಇನ್ನೊಂದು ಡ್ರೋನ್ ದಾಳಿಯಲ್ಲಿ ಸೈನಿಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa