
ವಾರಾಣಾಸಿ, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ವಾರಾಣಾಸಿ ಭೇಟಿಯ ಕೊನೆಯ ದಿನ ಭವ್ಯ ರೋಡ್ ಶೋ ನಡೆಸಿ, ಕಾಶಿ ವಿಶ್ವನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬರೇಕಾ ಅತಿಥಿ ಗೃಹದಿಂದ ದೇವಾಲಯದವರೆಗೆ ಸುಮಾರು 14 ಕಿಲೋಮೀಟರ್ ದೂರ ನಡೆದ ಈ ರೋಡ್ ಶೋ ವೇಳೆ ನಗರವೇ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಯಿತು.
ಪ್ರಧಾನಿಯವರ ವಾಹನ ಬರೇಕಾದಿಂದ ಹೊರಟ ತಕ್ಷಣವೇ, ಬಿಜೆಪಿ ಕಾರ್ಯಕರ್ತರು ಹಾಗೂ ಸಾವಿ ರಾ ರು ನಾಗರಿಕರು ಶಂಖನಾದ, ಡ್ರಮ್ ಧ್ವನಿ ಮತ್ತು ಹೂವಿನ ಸುರಿಮಳೆಯೊಂದಿಗೆ ಭವ್ಯ ಸ್ವಾಗತ ಕೋರಿದರು. “ಮೋದಿ-ಮೋದಿ”, “ಜೈ ಶ್ರೀರಾಮ್”, “ಹರ್ ಹರ್ ಮಹಾದೇವ್” ಎಂಬ ಘೋಷಣೆಗಳು ಮೊಳಗಿದವು.
ಮಂಡುವಾಡಿ ಕ್ರಾಸ್ರೋಡ್, ಫುಲ್ವಾರಿಯಾ ಮೇಲ್ಸೇತುವೆ, ಜೆ.ಪಿ. ಮೆಹ್ತಾ ತಿರಾಹಾ, ಪೊಲೀಸ್ ಲೈನ್, ಅಂಬೇಡ್ಕರ್ ಚೌರಾಹಾ, ಲಾಹುರಾಬೀರ್, ಕಬೀರ್ಚೌರಾ ಸೇರಿದಂತೆ ಪ್ರಮುಖ ಮಾರ್ಗಗಳ ಮೂಲಕ ಪ್ರಧಾನಿಯವರ ವಾಹನ ನಿಧಾನವಾಗಿ ಸಾಗಿತು. ಮಹಿಳೆಯರು, ಮಕ್ಕಳು ಮನೆಗಳ ಮೇಲ್ಛಾವಣಿ ಮತ್ತು ಬಾಲ್ಕನಿಗಳಿಂದ ಹೂವುಗಳನ್ನು ಸುರಿಸಿ ಸಂಭ್ರಮ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ವಾರಣಾಸಿ ಘಟಕವು ಐದು ಪ್ರಮುಖ ಸ್ವಾಗತ ಕೇಂದ್ರಗಳನ್ನು ಸ್ಥಾಪಿಸಿತ್ತು. ಪ್ರತಿಯೊಂದು ಸ್ಥಳದಲ್ಲೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಾಲುಗಟ್ಟಿ ನಿಂತು ಪ್ರಧಾನಿಯನ್ನು ಸ್ವಾಗತಿಸಿದರು. ನಾಗರಿಕರ ಪ್ರೀತಿ ಮತ್ತು ಆತ್ಮೀಯತೆಯನ್ನು ಕಂಡ ಪ್ರಧಾನಿಯವರು ಕೈಮುಗಿದು, ಕೈಬೀಸಿ ಅಭಿನಂದನೆ ಸ್ವೀಕರಿಸಿದರು.
ಭದ್ರತೆ ದೃಷ್ಟಿಯಿಂದ, ರೋಡ್ ಶೋ ಮಾರ್ಗದಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಮೈದಾಗಿನಿಯಿಂದ ಕಾಶಿ ವಿಶ್ವನಾಥ ಧಾಮದವರೆಗೆ ವಾಹನ ಸಂಚಾರ ಶೂನ್ಯಗೊಳಿಸಲಾಗಿದ್ದು, ಪಾದಚಾರಿಗಳಿಗೂ ನಿರ್ದಿಷ್ಟ ಮಾರ್ಗಗಳನ್ನು ಮಾತ್ರ ಅನುಮತಿಸಲಾಯಿತು. ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa