ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ದಾಳಿ ; ಕಾರು ಸವಾರರ ವಿರುದ್ಧ ಕೊಲೆ ಯತ್ನ ಪ್ರಕರಣ
ವಿಜಯಪುರ, 29 ಏಪ್ರಿಲ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕಾರು ಸವಾರರು ದಾಳಿ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಸವೇಶ್ವರ ಸರ್ಕಲ್ ಹಾಗೂ ಬಸ್ ಸ್ಟ್ಯಾಂಡ್ ಪ್ರದೇಶದಲ್ಲಿ ಸಂಚಾರ ನಿಯಂತ್ರಣದ ವೇಳೆ ಈ ಘಟನೆ ಸಂಭವಿಸಿದ್ದು
ಹಲ್ಲೆ


ವಿಜಯಪುರ, 29 ಏಪ್ರಿಲ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕಾರು ಸವಾರರು ದಾಳಿ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಸವೇಶ್ವರ ಸರ್ಕಲ್ ಹಾಗೂ ಬಸ್ ಸ್ಟ್ಯಾಂಡ್ ಪ್ರದೇಶದಲ್ಲಿ ಸಂಚಾರ ನಿಯಂತ್ರಣದ ವೇಳೆ ಈ ಘಟನೆ ಸಂಭವಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಬಸವೇಶ್ವರ ಸರ್ಕಲ್ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದ ಹಿನ್ನೆಲೆ ಸಂಚಾರ ಸುಗಮಗೊಳಿಸಲು ಪೊಲೀಸರು ವಾಹನಗಳನ್ನು ಮುಂದಕ್ಕೆ ಸಾಗಿಸಲು ಸೂಚಿಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಕೆಲವರು ಪೊಲೀಸರ ಸೂಚನೆಯನ್ನು ಲೆಕ್ಕಿಸದೇ ವಾಗ್ವಾದಕ್ಕೆ ಇಳಿದಿದ್ದಾರೆ. ವಾಹನ ತೆರವುಗೊಳಿಸಲು ನಿರಾಕರಿಸಿದ ಅವರು ಮೇಲಾಧಿಕಾರಿಗಳ ಸಂಪರ್ಕ ಸಂಖ್ಯೆ ಕೇಳಿ ಜಗಳ ಆರಂಭಿಸಿದರು ಎಂದು ತಿಳಿದು ಬಂದಿದೆ.

ಪೊಲೀಸರು ಮನವೊಲಿಸಲು ಯತ್ನಿಸಿದರೂ ಆರೋಪಿತರು ಆಕ್ರೋಶಗೊಂಡು ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಸಮವಸ್ತ್ರ ಹಿಡಿದು ಎಳೆದಾಡಿ, ಕತ್ತು ಹಿಡಿದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಇತರ ಸಿಬ್ಬಂದಿ ಮಧ್ಯಪ್ರವೇಶಿಸಿ ನಿಯಂತ್ರಣಕ್ಕೆ ತಂದರು.

ನಂತರ ಆರೋಪಿತರು ಬಸ್ ಸ್ಟ್ಯಾಂಡ್ ಸಮೀಪ ಮತ್ತೊಮ್ಮೆ ವಾಹನ ನಿಲ್ಲಿಸಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟುಮಾಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ಮೇಲೆಯೂ ದೌರ್ಜನ್ಯ ನಡೆಸಿ, ಸಮವಸ್ತ್ರದ ಬಟನ್ ಹರಿದು ತಳ್ಳಾಟ ನಡೆಸಿದ ಘಟನೆ ವರದಿಯಾಗಿದೆ. ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೂ ಹಲ್ಲೆ ನಡೆದಿರುವುದು ಗಂಭೀರ ಸಂಗತಿಯಾಗಿದೆ.

ಘಟನೆಯ ಬಳಿಕ ಪೊಲೀಸರು ಆರೋಪಿತರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದರು. ವಿಚಾರಣೆಯಲ್ಲಿ ಆರೋಪಿತರನ್ನು ಶಿವಪ್ಪ ಲಮಾಣಿ, ಸೈಮನ್ ಲಮಾಣಿ ಹಾಗೂ ಸುಮಿತ್ರಾ ಲಮಾಣಿ ಎಂದು ಗುರುತಿಸಲಾಗಿದೆ.

ಈ ಸಂಬಂಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಹಲ್ಲೆ, ಅವಾಚ್ಯ ಶಬ್ದ ಬಳಕೆ ಹಾಗೂ ಕೊಲೆ ಯತ್ನ ಸೇರಿದಂತೆ ವಿವಿಧ ಗಂಭೀರ ಆರೋಪಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಎದುರಿಸುವ ಸವಾಲುಗಳನ್ನು ಮತ್ತೆ ಬೆಳಕಿಗೆ ತಂದಿದ್ದು, ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಅಗತ್ಯವೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande