
ಬಾಗಲಕೋಟೆ, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದಲ್ಲಿ ನಡೆಯುತ್ತಿರುವ ಲಕ್ಷ್ಮೀದೇವಿ ಜಾತ್ರೋತ್ಸವವು ಭಕ್ತಿಭಾವ, ಸಂಭ್ರಮ ಮತ್ತು ಸಾಂಪ್ರದಾಯಿಕ ಆಚರಣೆಗಳ ನಡುವೆ ಅದ್ದೂರಿಯಾಗಿ ಜರುಗುತ್ತಿದೆ. ಜಾತ್ರೆಯ ಪ್ರಮುಖ ಅಂಗವಾದ ಭಂಡಾರ ಕಾರ್ಯಕ್ರಮದಲ್ಲಿ ಭಕ್ತರ ಸಾಗರವೇ ಮಿಂದೆದ್ದಿದ್ದು, ಗ್ರಾಮದ ಎಲ್ಲಾ ಬೀದಿಗಳು ಜನರಿಂದ ಕಿಕ್ಕಿರಿದು ತುಂಬಿದ್ದ ದೃಶ್ಯ ಕಂಡ ಬಂದಿತು.
ಗ್ರಾಮದ ಹಿರಕನ್ನವರ ಓಣಿಯಲ್ಲಿ ಇರುವ ಆರಾಧ್ಯ ದೈವ ಲಕ್ಷ್ಮೀದೇವಿ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಈ ಮೆರವಣಿಗೆಯಲ್ಲಿ ಗ್ರಾಮಸ್ಥರ ಜೊತೆಗೆ ಸುತ್ತಮುತ್ತಲಿನ ಹಳ್ಳಿಗಳ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರೆಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದರು.
ಮೆರವಣಿಗೆಯ ವೇಳೆ ಡೊಳ್ಳಿನ ವಾದನ, ಶೃಂಗಾರಿಕವಾಗಿ ಅಲಂಕರಿಸಿದ ಭಾವಚಿತ್ರಗಳು ಹಾಗೂ ತಲೆಯ ಮೇಲೆ ಕುಂಭ ಹೊತ್ತು ಸಾಗಿದ ಮಹಿಳೆಯರು ಮೆರವಣಿಗೆಯ ಮೆರಗು ಹೆಚ್ಚಿಸಿದರು. ಭಕ್ತರು ಭಕ್ತಿಗೀತೆಗಳನ್ನು ಹಾಡುತ್ತಾ, ಜೈಘೋಷಗಳನ್ನು ಹಾಕುತ್ತ ದೇವಿಯ ಕೃಪೆಗೆ ಪಾತ್ರರಾದರು.
ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ರಾತ್ರಿ ವೇಳೆ ಸಂಗೀತ ಕಾರ್ಯಕ್ರಮಗಳು, ಹರಿಕಥೆ ಹಾಗೂ ನೃತ್ಯ ಪ್ರದರ್ಶನಗಳು ಜನರನ್ನು ಆಕರ್ಷಿಸುತ್ತಿವೆ. ಮಕ್ಕಳಿಂದ ಹಿರಿಯರ ತನಕ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮವನ್ನು ಹಂಚಿಕೊಂಡರು.
ಸ್ಥಳೀಯರು ಮಾತನಾಡಿ, ಲಕ್ಷ್ಮೀದೇವಿ ಜಾತ್ರೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದ್ದು, ಇಂತಹ ಉತ್ಸವಗಳು ಗ್ರಾಮದಲ್ಲಿ ಏಕತೆಯನ್ನು ಬಲಪಡಿಸುವುದರ ಜೊತೆಗೆ ಭಕ್ತಿಭಾವವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು. ಭಂಡಾರದಲ್ಲಿ ಭಾಗವಹಿಸಿದ ಭಕ್ತರು ದೇವಿಯ ಅನುಗ್ರಹಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande