
ಬೆಂಗಳೂರು, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಚನ್ನಸಂದ್ರ ರೈಲು ನಿಲ್ದಾಣದಲ್ಲಿ ಯಾರ್ಡ್ ಮರುವಿನ್ಯಾಸ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಹಲವಾರು ಪ್ರಮುಖ ಎಕ್ಸ್ಪ್ರೆಸ್ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಪ್ರಕಟಿಸಿದೆ. ಏಪ್ರಿಲ್ 29ರಿಂದ ಮೇ 2ರವರೆಗೆ ವಿವಿಧ ದಿನಾಂಕಗಳಲ್ಲಿ ಕೆಲವು ರೈಲುಗಳು ಭಾಗಶಃ ರದ್ದುಗೊಂಡು, ಕೆಲವು ರೈಲುಗಳ ಆರಂಭಿಕ ನಿಲ್ದಾಣಗಳಲ್ಲಿ ಬದಲಾವಣೆ ಮಾಡಲಾಗಿದೆ.
ರೈಲ್ವೆಯ ಇಲಾಖೆ ಪ್ರಕಟಣೆ ಪ್ರಕಾರ, ಮುಂಬೈ-ಬೆಂಗಳೂರು ನಡುವೆ ಸಂಚರಿಸುವ ರೈಲು ಸಂಖ್ಯೆ 11301 ಮತ್ತು 11302 ಎಕ್ಸ್ಪ್ರೆಸ್ಗಳ ಸೇವೆ ಯಲಹಂಕ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದೇ ವೇಳೆ, 11302 ರೈಲು ಕೆಎಸ್ಆರ್ ಬೆಂಗಳೂರು ಬದಲಾಗಿ ಯಲಹಂಕ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
ಹುಬ್ಬಳ್ಳಿ-ಬೆಂಗಳೂರು ಮಾರ್ಗದ 20687 ಮತ್ತು 20688 ಎಕ್ಸ್ಪ್ರೆಸ್ ರೈಲುಗಳೂ ಯಶವಂತಪುರ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದ್ದು, 20688 ರೈಲು ಯಶವಂತಪುರ ನಿಲ್ದಾಣದಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ.
ಇನ್ನು ಭುವನೇಶ್ವರ-ಬೆಂಗಳೂರು ನಡುವೆ ಸಂಚರಿಸುವ 18463 ಮತ್ತು 18464 ಪ್ರಶಾಂತಿ ಎಕ್ಸ್ಪ್ರೆಸ್ ರೈಲುಗಳ ಸೇವೆಯಲ್ಲಿಯೂ ಬದಲಾವಣೆ ಮಾಡಲಾಗಿದ್ದು, ಯಲಹಂಕ ಮತ್ತು ಕೆಎಸ್ಆರ್ ಬೆಂಗಳೂರು ನಡುವಿನ ಭಾಗದಲ್ಲಿ ಸಂಚಾರ ಸ್ಥಗಿತಗೊಳ್ಳಲಿದೆ. 18464 ರೈಲು ಯಲಹಂಕ ನಿಲ್ದಾಣದಿಂದ ಹೊರಡುವಂತೆ ತಿದ್ದುಪಡಿ ಮಾಡಲಾಗಿದೆ.
ಚನ್ನಸಂದ್ರ ಯಾರ್ಡ್ನಲ್ಲಿ ನಡೆಯುತ್ತಿರುವ ಈ ಮರುವಿನ್ಯಾಸ ಕಾಮಗಾರಿಯಿಂದ ಭವಿಷ್ಯದಲ್ಲಿ ರೈಲು ಸಂಚಾರ ಸುಗಮವಾಗಲಿದ್ದು, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿ, ಟಿಕೆಟ್ ವಿವರಗಳನ್ನು ಪರಿಶೀಲಿಸಿಕೊಳ್ಳುವಂತೆ ಬೆಂಗಳೂರು ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ.ಎನ್.ಪ್ರಾಣೇಶ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa