
ಬಾಗಲಕೋಟೆ, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ದಲಿತ ನಾಯಕರ ಸಂಭ್ರಮಾಚರಣೆಯನ್ನು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತೀವ್ರವಾಗಿ ವ್ಯಂಗ್ಯವಾಡಿ ಟೀಕಿಸಿದರು.
ಬಾಗಲಕೋಟೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೆಲವರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಅವರಿಗೆ ತವರು ಮನೆ ಯಾವುದು, ಗಂಡನ ಮನೆ ಯಾವುದು ಎಂಬುದೇ ಗೊತ್ತಿಲ್ಲ. ಕೆಲ ಕೋಳಿಗಳಿಗೆ ಕಾಳು ಹಾಕಿದಂತೆ, ಕಾಳು ತಿನ್ನಲು ಇಂತಹ ನಡೆ ತೋರಿಸುತ್ತಿದ್ದಾರೆ” ಎಂದು ಕಾಂಗ್ರೆಸ್ ದಲಿತ ನಾಯಕರ ಮೇಲೆ ಕಿಡಿಕಾರಿದರು.
ಒಳ ಮೀಸಲಾತಿಯ ಪ್ರಮಾಣ ಕುರಿತು ಪ್ರಶ್ನೆ ಎತ್ತಿದ ಅವರು, “ಚಲವಾದಿ ಹಾಗೂ ಮಾದಿಗ ಸಮುದಾಯಗಳಿಗೆ 5.25 ಶೇಕಡಾ ಮೀಸಲಾತಿ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆ .25 ಅನ್ನು ಹೇಗೆ ಅನುಷ್ಠಾನಗೊಳಿಸುತ್ತಾರೆ? ಪಾಯಿಂಟ್ 25 ಎನ್ನುವುದು ಪ್ರಾಯೋಗಿಕವಾಗಿ ಇಲ್ಲವೇ ಇಲ್ಲ. ವಾಸ್ತವವಾಗಿ 5 ಶೇಕಡಾ ಮಾತ್ರ ಸಿಗುವ ಪರಿಸ್ಥಿತಿ ಉಂಟಾಗಿದೆ” ಎಂದು ಹೇಳಿದರು.
ಈ ರೀತಿಯ ಒಳ ಮೀಸಲಾತಿ ಕೇವಲ ಕೆಲವೇ ಹುದ್ದೆಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಆರೋಪಿಸಿದ ಅವರು, “ಸ್ಕಾವೆಂಜರ್, ಸ್ವೀಪರ್, ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗಷ್ಟೇ ಇದರ ಲಾಭ ಸೀಮಿತವಾಗುತ್ತದೆ. ಇತರ ಉನ್ನತ ಹುದ್ದೆಗಳಿಗೆ ಯಾವುದೇ ಪ್ರಯೋಜನ ಇರುವುದಿಲ್ಲ” ಎಂದು ತಿಳಿಸಿದರು.
ವಿವಿಧ ಇಲಾಖೆಗಳಲ್ಲಿನ ನೇಮಕಾತಿ ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು, “ಒಂದೇ ವೇಳೆ 15 ಕ್ಕಿಂತ ಹೆಚ್ಚು ಹುದ್ದೆಗಳು ಬರೋದಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಒಂದೆರಡು ಹುದ್ದೆಗಳು ಮಾತ್ರ ಬರುತ್ತವೆ. ಡಿವೈಎಸ್ಪಿ, ಅಸಿಸ್ಟೆಂಟ್ ಕಮಿಷನರ್ ಹುದ್ದೆಗಳು ನಾಲ್ಕು ಅಥವಾ ಆರು ಬರುತ್ತವೆ. ಇಂತಹ ಸಂದರ್ಭಗಳಲ್ಲಿ ಮೀಸಲಾತಿ ಅನ್ವಯವಾಗುವುದೇ ಇಲ್ಲ. ಹೀಗಾದರೆ ಮೀಸಲಾತಿ ಯಾರಿಗಾಗಿ?” ಎಂದು ಪ್ರಶ್ನಿಸಿದರು.
“ಇದು ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯವೇ? ಕಾಂಗ್ರೆಸ್ನ ನೀತಿಯೇ ಇದೇನಾ?” ಎಂದು ಪ್ರಶ್ನಿಸಿದ ಕಾರಜೋಳ, ಸರ್ಕಾರ ಕೂಡಲೇ ಒಳ ಮೀಸಲಾತಿ ನೀತಿಯನ್ನು ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.
ತಿದ್ದುಪಡಿ ಮಾಡದಿದ್ದಲ್ಲಿ ರಾಜ್ಯದ ಉದ್ದಗಲಕ್ಕೂ ಬೃಹತ್ ಪ್ರಮಾಣದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande