
ಬಾಗಲಕೋಟೆ, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಒಳ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೈಗೊಂಡಿರುವ ನಿರ್ಣಯವೇ ಸರಿಯಾದ ಒಳ ಮೀಸಲಾತಿ ಅಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತೀವ್ರವಾಗಿ ಟೀಕಿಸಿದರು.
ಬಾಗಲಕೋಟೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಒಳ ಮೀಸಲಾತಿ ಎಂದರೆ ಎಲ್ಲಾ ಹುದ್ದೆಗಳಿಗೂ ಸಮಾನವಾಗಿ ಅನ್ವಯವಾಗಬೇಕು. ಆದರೆ 15ಕ್ಕೂ ಕಡಿಮೆ ಹುದ್ದೆಗಳಿದ್ದಲ್ಲಿ ಮೀಸಲಾತಿ ಅನ್ವಯಿಸುವುದಿಲ್ಲ ಎಂಬ ನಿಯಮ ತಂದಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ” ಎಂದು ಹೇಳಿದರು.
ಮೈಸೂರು ಉದಾಹರಣೆಯನ್ನು ಉಲ್ಲೇಖಿಸಿದ ಅವರು, “ಒಟ್ಟು 47 ಎಸ್.ಸಿ. ಪ್ರೊಫೆಸರ್ಗಳಲ್ಲಿ 43 ಮಂದಿ ಒಂದೇ ಜಾತಿಗೆ ಸೇರಿದವರು. ಮೂವರು ಮಾತ್ರ ಮಾದಿಗ ಸಮುದಾಯದವರು, ಒಬ್ಬರು ಭೋವಿ ಸಮುದಾಯದವರು. ಇದು ಸಾಮಾಜಿಕ ನ್ಯಾಯವೇ?” ಎಂದು ಪ್ರಶ್ನಿಸಿದರು.
ನಾಗಮೋಹನದಾಸ್ ಸಮಿತಿಯ ವರದಿ ವೈಜ್ಞಾನಿಕವಾಗಿದ್ದರೂ ಅದನ್ನು ಸರ್ಕಾರ ಅವೈಜ್ಞಾನಿಕ ಎಂದು ತಳ್ಳಿಹಾಕಿದೆ ಎಂದು ಆರೋಪಿಸಿದ ಕಾರಜೋಳ, “ಮಾಧುಸ್ವಾಮಿ ವರದಿ, ನ್ಯಾಯಮೂರ್ತಿ ಸದಾಶಿವಯ್ಯ ವರದಿ ಸೇರಿದಂತೆ ಹಲವಾರು ವರದಿಗಳನ್ನು ಸರ್ಕಾರ ಅವೈಜ್ಞಾನಿಕ ಎಂದು ಘೋಷಿಸುತ್ತಿದೆ. ಆದರೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ಹೊಸ ಸಮಿತಿ ರಚಿಸಿ ವರದಿ ಪಡೆಯುವ ಅಗತ್ಯವೇನು?” ಎಂದು ಪ್ರಶ್ನಿಸಿದರು.
ಒಳ ಮೀಸಲಾತಿ ಸರ್ವೆಗೆ ಸಾವಿರಾರು ಕೋಟಿ ರೂ. ಖರ್ಚು ಮಾಡಿದ್ದರೂ ಅದರ ಪ್ರಯೋಜನ ಏನು ಎಂಬುದನ್ನು ಸರ್ಕಾರ ಜನತೆಗೆ ತಿಳಿಸಬೇಕು ಎಂದು ಅವರು ಆಗ್ರಹಿಸಿದರು.
ಸರ್ಕಾರದ ಈ ನೀತಿ ತಾರತಮ್ಯಕ್ಕೆ ಕಾರಣವಾಗಿದ್ದು, ನಿಜವಾದ ಸಾಮಾಜಿಕ ನ್ಯಾಯ ಕಾಪಾಡಲು ಒಳ ಮೀಸಲಾತಿಯನ್ನು ಸಮಗ್ರವಾಗಿ ಮತ್ತು ವೈಜ್ಞಾನಿಕವಾಗಿ ಜಾರಿಗೊಳಿಸಬೇಕು ಎಂದು ಕಾರಜೋಳ ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande