ಭಾರತಂ ಮಿಷನ್ ಜಾರಿಗೆ ಕ್ರಮ : ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್
ಗದಗ, 28 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೇಂದ್ರ ಸರ್ಕಾರದ ಜ್ಞಾನ ಭಾರತಂ ಮಿಷನ್ ಯೋಜನೆಯಡಿಯಲ್ಲಿ ರಾಷ್ಟ್ರಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈ ಬರಹದ ಪಠ್ಯಗಳು, ಹಸ್ತಪ್ರತಿಗಳು ಮತ್ತು ದಾಖಲೆಗಳನ್ನು ಇಂದಿನ ತಂತ್ರಜ್ಞಾನ ಮೂಲಕ ಶಾಶ್ವತವಾಗಿ ಉಳಿಸಲು ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ಡಿಜಿಟಲೀಕರ
ಫೋಟೋ


ಗದಗ, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೇಂದ್ರ ಸರ್ಕಾರದ ಜ್ಞಾನ ಭಾರತಂ ಮಿಷನ್ ಯೋಜನೆಯಡಿಯಲ್ಲಿ ರಾಷ್ಟ್ರಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈ ಬರಹದ ಪಠ್ಯಗಳು, ಹಸ್ತಪ್ರತಿಗಳು ಮತ್ತು ದಾಖಲೆಗಳನ್ನು ಇಂದಿನ ತಂತ್ರಜ್ಞಾನ ಮೂಲಕ ಶಾಶ್ವತವಾಗಿ ಉಳಿಸಲು ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ಡಿಜಿಟಲೀಕರಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ಗದಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂಜೆ ಜರುಗಿದ ಜ್ಞಾನ ಭಾರತಂ ಮಿಷನ್ ಯೋಜನೆಯಡಿಯಲ್ಲಿ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಟಲೀಕರಣ ಕಾರ್ಯಯೋಜನೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಡೀ ದೇಶದಲ್ಲಿರುವ ಹಸ್ತಪ್ರತಿಗಳ ಮಾಹಿತಿಯನ್ನು ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಷನ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಸಂಗ್ರಹಣೆಗೊಳ್ಳುವ ಹಸ್ತಪ್ರತಿಗಳ ರಾಷ್ಟಿçÃಯ ಭಂಡಾರದ ದತ್ತಾಂಶದ ಮಾಹಿತಿಯನ್ನು ವಿಶ್ವಕ್ಕೆ ಹಂಚಿಕೊಳ್ಳುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ರಾಷ್ಟಾಧ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈ ಬರಹದ ಪಠ್ಯಗಳು, ಹಸ್ತಪ್ರತಿಗಳು ಮತ್ತು ದಾಖಲೆಗಳ ಇಂದಿನ ತಂತ್ರಜ್ಞಾನ ಮೂಲಕ ಶಾಶ್ವತವಾಗಿ ಉಳಿಸಲು ಇವುಗಳ ಸಮೀಕ್ಷೆ, ಸಂರಕ್ಷಣೆ , ರಕ್ಷಣೆ, ಡಿಜಿಟಲೀಕರಣ, ನೋಂದಣಿ, ವಿಮರ್ಶಾತ್ಮಕ ಸಂಪಾದನೆ , ಅನುವಾದ ಮತ್ತು ಪ್ರಕಟಣೆಯನ್ನು ಮಾಡುವ ಮೂಲಕ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ರಾಷ್ಟ್ರೀಯ ವೇದಿಕೆಯ ಮೂಲಕ ಸಾರ್ವಜನಿಕ ಪ್ರವೇಶವನ್ನು ಒದಗಿಸಿ ಭವಿಷ್ಯದ ಪೀಳಿಗೆಗೆ ಅವುಗಳ ಜ್ಞಾನ ಸಂಪತ್ತಿನ ಸಂರಕ್ಷಣೆ ಮತ್ತು ಬಳಕೆಯ ಉದ್ದೇಶ ಹೊಂದಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ವರ ವಿಭೂತಿ ಮಾತನಾಡಿ ಜ್ಞಾನ ಭಾರತಂ ಮಿಷನ್ ಯೋಜನೆಯೊಂದಿಗೆ ರಾಜ್ಯ ಸರ್ಕಾರವು ಕೈ ಜೋಡಿಸುವ ಸಲುವಾಗಿ ರಾಜ್ಯದಾದ್ಯಂತ ಹಸ್ತಪ್ರತಿಗಳ ಸಮೀಕ್ಷೆ ಕಾರ್ಯ ಪ್ರಾರಂಭಿಸಿ, ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ರಾಜ್ಯ ಮಟ್ಟದ ಸ್ಥಾಯಿ ಸಮಿತಿಯನ್ನು ರಚಿಸಲಾಗಿದೆ. ಅದೇ ರೀತಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದೆ. ಸಂಬಂಧಿತ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿದ್ದು , ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು/ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ ಎಂದರು.

ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಮಹಾನಗರಪಾಲಿಕೆ/ ನಗರಸಭೆ ಪೌರಾಯುಕ್ತರು, ಕ್ಲಸ್ಟರ್ ಕೇಂದ್ರದ ಸಂಯೋಜಕರು, ಜಿಲ್ಲೆಯ ರಾಜ್ಯ ವಿಶ್ವ ವಿದ್ಯಾಲಯ/ ಸಂಶೋಧನಾ ಸಂಸ್ಥೆಯ ನೋಂದಣಾಧಿಕಾರಿಗಳು, ಹಸ್ತಪ್ರತಿ/ ಶಿಲಾಶಾಸನಶಾಸ್ತç / ಇತಿಹಾಸ/ ಸಂಸ್ಕೃತ/ ಪ್ರಾದೇಶಿಕ ಬಾಷೆಗಳು/ ಆರ್ಕೆವ್ ವಿಷಯದಲ್ಲಿ ಜಿಲ್ಲಾಧಿಕಾರಿಗಳಿಂದ ನಾಮನಿರ್ದೇಶಿತ ಇಬ್ಬರು ತಜ್ಞರು ಸಮಿತಿಯ ಸದಸ್ಯರುಗಳಾಗಿರುತ್ತಾರೆ ಎಂದರು.

ಜಿಲ್ಲೆಯ ಗ್ರಂಥಾಲಯಗಳು, ದೇವಾಲಯಗಳು, ಮಠಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಖಾಸಗಿ ಸಂಗ್ರಹಗಳಲ್ಲಿ ಇರುವ ಹಸ್ತಪ್ರತಿಗಳನ್ನು ಗುರುತಿಸಿ ದಾಖಲಿಸುವುದು, ಸಂಗ್ರಹ ಸ್ಥಳಗಳಿಗೆ ಪ್ರವೇಶ ಕಲ್ಪಿಸಿ, ಸಂರಕ್ಷಕರ ಸಹಕಾರವನ್ನು ಸಮೀಕ್ಷಾ ಪ್ರಕ್ರಿಯೆಯಲ್ಲಿ ಖಚಿತಪಡಿಸುವುದು, ಸಮೀಕ್ಷಾ ತಂಡಗಳಿಗೆ ದಾಖಲೀಕರಣ ಹಾಗೂ ಪಟ್ಟಿ ಮಾಡಿಕೆ ಕಾರ್ಯಗಳಲಿ ಸಹಾಯ ಮಾಡುವುದು, ಸ್ಥಳೀಯ ಸಂಸ್ಥೆಗಳು ಮತ್ತು ಹಸ್ತಪ್ರತಿ ಸಂರಕ್ಷಕರಲ್ಲಿ ಮಿಷನ್ ನ ಉದ್ದೇಶಗಳಕುರಿತು ಜಾಗೃತಿ ಮೂಡಿಸುವುದು, ರಾಜ್ಯ ನೋಡಲ್ ಇಲಾಖೆಗೆ ನಿಯಮಿತ ಅವಧಿಯಲ್ಲಿ ಪ್ರಗತಿಯ ವರದಿ ಸಲ್ಲಿಸುವುದು ಇವು ಸಮಿತಿಯ ಕರ್ತವ್ಯಗಳಾಗಿವೆ ಎಂದು ಸಭೆಗೆ ವಿವರಿಸಿದರು.

ಇದೇ ಸಂದರ್ಭದಲ್ಲಿ ಕ್ಲಸ್ಟರ್ ಕೇಂದ್ರಗಳ ಪಾತ್ರ, ಜಿಲ್ಲಾ ಮಟ್ಟದ ಸಮನ್ವಯ , ಸಮೀಕ್ಷೆ ಜಾರಿಯ ವಿಧಾನ, ಮೇಲ್ವಿಚಾರಣೆ ಮತ್ತು ಪರಿಶೀಲನೆ, ಅನುಸರಣೆ ಮತ್ತು ನೈತಿಕ ಮಾರ್ಗಸೂಚಿಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಆರ್ಡಿಪಿಆರ್ ವಿಶ್ವವಿದ್ಯಾಲಯದ ಶಶಿಭೂಷಣ, ಎಸ್ ಎಂ ಸಿಂಪಿಗೇರ, ಜಿ ಎಸ್ ಗಾವಕರ್, ಗುರುಸಿದ್ದಪ್ಪಯ್ಯ ಹಿರೇಮಠ, ಶ್ರೀಧರ್ರಾವ್ ಸೇರಿದಂತೆ ಇತರರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande