ಒಳ ಮೀಸಲಾತಿ ವೈಜ್ಞಾನಿಕ ಅನುಷ್ಠಾನ : ಕಾಂಗ್ರೆಸ್ ಸರ್ಕಾರಕ್ಕೆ ರಮೇಶ ಗುಬ್ಬೇವಾಡ ಮೆಚ್ಚುಗೆ
ವಿಜಯಪುರ, 28 ಏಪ್ರಿಲ್ (ಹಿ.ಸ.) : ಆ್ಯಂಕರ್ : ಹಲವು ವರ್ಷಗಳಿಂದ ಜಾರಿಯಾಗದೆ ಬಾಕಿ ಉಳಿದಿದ್ದ ಒಳ ಮೀಸಲಾತಿಯನ್ನು ಯಾವುದೇ ಸಮಾಜಕ್ಕೂ ಅನ್ಯಾಯವಾಗದಂತೆ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ ಹೇಳ
ಮೀಸಲಾತಿ


ವಿಜಯಪುರ, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಹಲವು ವರ್ಷಗಳಿಂದ ಜಾರಿಯಾಗದೆ ಬಾಕಿ ಉಳಿದಿದ್ದ ಒಳ ಮೀಸಲಾತಿಯನ್ನು ಯಾವುದೇ ಸಮಾಜಕ್ಕೂ ಅನ್ಯಾಯವಾಗದಂತೆ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ ಹೇಳಿದರು.

ವಿಜಯಪುರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಕೇವಲ ಭರವಸೆ ನೀಡುತ್ತಲೇ ಬಂದಿದ್ದು, ಅಧಿಕಾರದಲ್ಲಿದ್ದಾಗಲೂ ಜಾರಿಗೊಳಿಸಲು ವಿಫಲವಾಗಿದೆ ಎಂದು ಟೀಕಿಸಿದರು. ಆದರೆ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಒಳ ಮೀಸಲಾತಿಯನ್ನು ಜಾರಿಗೊಳಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಒಳ ಮೀಸಲಾತಿಯ ಅಡಿಯಲ್ಲಿ ಬಲಗೈ ಸಮುದಾಯಕ್ಕೆ ಶೇ.5.5, ಎಡಗೈ ಸಮುದಾಯಕ್ಕೆ ಶೇ.5.5 ಹಾಗೂ ಅಲೆಮಾರಿ ಸಮುದಾಯಗಳಿಗೆ ಶೇ.4.5 ಮೀಸಲಾತಿ ಕಲ್ಪಿಸಲಾಗಿದೆ. ಅಲೆಮಾರಿ ಸಮುದಾಯಕ್ಕೂ ನ್ಯಾಯ ದೊರಕುವಂತೆ ಸಮಾನತೆ ಕಾಪಾಡಿ ಈ ವ್ಯವಸ್ಥೆ ಜಾರಿಗೊಂಡಿದೆ ಎಂದು ವಿವರಿಸಿದರು. ರೋಸ್ಟರ್ ವ್ಯವಸ್ಥೆಯನ್ನೂ ವೈಜ್ಞಾನಿಕವಾಗಿ ಜಾರಿಗೆ ತರಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಎಸ್ಇಟಿ-ಟಿಎಸ್ಪಿ (SC/ST Sub Plan) ಎಂಬ ವಿಶೇಷ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವೇ ರೂಪಿಸಿದ್ದು, ಎಸ್.ಸಿ.-ಎಸ್.ಟಿ ಅನುದಾನವನ್ನು ಯಾವುದೇ ರೀತಿಯಲ್ಲಿ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪಕ್ಕೆ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪಾಲಿಕೆ ಸದಸ್ಯೆ ಆರತಿ ಶಹಾಪೂರ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಜನಪ್ರಿಯತೆಯನ್ನು ಸಹಿಸಲಾಗದೇ ಬಿಜೆಪಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ದಲಿತರ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ ಎಂಬ ತಪ್ಪು ಕಲ್ಪನೆ ಹರಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎ. ಮುಲ್ಲಾ, ವಸಂತ ಹೊನಮೋಡೆ, ಮಹಾದೇವ ಚಲವಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande