
ವಿಜಯಪುರ, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ ಬಸನವನಬಾಗೇವಾಡಿ ಪಟ್ಟಣದಲ್ಲಿ ಗಾಂಜಾ ಹಾಗೂ ನಿಷೇಧಿತ ಸಿಗರೇಟ್ಗಳ ಮಾರಾಟ ಹೆಚ್ಚುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಗಂಭೀರ ಆತಂಕ ವ್ಯಕ್ತವಾಗಿದೆ. ವಿಶೇಷವಾಗಿ ಪಾನ್ ಶಾಪ್ಗಳಲ್ಲಿ ಇಂತಹ ಮಾದಕ ವಸ್ತುಗಳು ಸಿಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಯುವಕರು ಇದರಿಂದ ದುಷ್ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ ಎಂದು ಪೋಷಕರು ಹಾಗೂ ನಾಗರಿಕರು ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ.
ಒಂದು ಸಿಗರೇಟ್ಗೆ ಸುಮಾರು ₹200ರವರೆಗೆ ಬೆಲೆ ನಿಗದಿಯಾಗಿದ್ದು, ಕೆಲ ಯುವಕರು ಈ ಮಾದಕ ವಸ್ತುಗಳನ್ನು ಸೇವಿಸಿ ಮತ್ತಿನಲ್ಲಿರುವ ಘಟನೆಗಳು ಕಂಡುಬರುತ್ತಿವೆ ಎಂದು ಹೇಳಲಾಗಿದೆ. ವಿಜಯಪುರದಿಂದ ಗಾಂಜಾ ಪಾಕೆಟ್ಗಳು ಹಾಗೂ ಸಿಗರೇಟ್ ಪೇಪರ್ಗಳನ್ನು ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ.
ಈ ಕುರಿತು ಸ್ಥಳೀಯರು ಈಗಾಗಲೇ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ, ವಿಶೇಷವಾಗಿ ಸಿಪಿಐ ಅವರಿಗೆ ಮನವಿ ಸಲ್ಲಿಸಿದರೂ ನಿರೀಕ್ಷಿತ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಪಟ್ಟಣದಲ್ಲಿ ಈ ಸಮಸ್ಯೆ ಗಂಭೀರ ರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದೀಗ ಪೋಷಕರಿಗೆ ತಮ್ಮ ಮಕ್ಕಳ ಮೇಲೆ ವಿಶೇಷ ಗಮನ ಹರಿಸುವಂತೆ ಮನವಿ ಮಾಡಲಾಗಿದ್ದು, ಅವರು ಯಾರ ಜೊತೆ ಸಂವಹನ ನಡೆಸುತ್ತಿದ್ದಾರೆ ಹಾಗೂ ಯಾವ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬುದನ್ನು ಗಮನಿಸುವುದು ಅಗತ್ಯವಾಗಿದೆ ಎಂದು ತಿಳಿಸಲಾಗಿದೆ.
ಸಮುದಾಯದ ಒಗ್ಗಟ್ಟಿನಿಂದ ಮಾತ್ರ ಇಂತಹ ದುಷ್ಪ್ರವೃತ್ತಿಗಳನ್ನು ತಡೆಗಟ್ಟಲು ಸಾಧ್ಯವೆಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆಯಾಗಿ, ಬಸವನಬಾಗೇವಾಡಿ ಪಟ್ಟಣದಲ್ಲಿ ಯುವಜನರ ಭವಿಷ್ಯ ಕಾಪಾಡಲು ತಕ್ಷಣ ಜಾಗೃತಿ ಮತ್ತು ಕಾನೂನು ಕ್ರಮಗಳು ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande