
ವಿಜಯಪುರ, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಎ.ಪಿ.ಎಂ.ಸಿ ಪೊಲೀಸ್ ಠಾಣೆಯವರು 2026ನೇ ಸಾಲಿನಲ್ಲಿ ದಾಖಲಾಗಿದ್ದ ಸ್ವತ್ತಿನ ಎರಡು ಪ್ರಮುಖ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ, ಮೂರು ಆರೋಪಿತರನ್ನು ಬಂಧಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿರುವರು.
ತನಿಖೆಯ ವೇಳೆ ಆರೋಪಿತರ ಬಳಿಯಿಂದ ಒಟ್ಟು 19,20,000 ರೂ. ಮೌಲ್ಯದ ಬಂಗಾರದ ಆಭರಣಗಳು, ನಗದು ಹಣ ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಚಾಕಚಕ್ಯತೆಯಿಂದ ನಡೆದ ಈ ಕಾರ್ಯಾಚರಣೆಯಲ್ಲಿ ಕಳ್ಳತನಕ್ಕೊಳಗಾದ ಅಮೂಲ್ಯ ಸ್ವತ್ತನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ನ್ಯಾಯಾಲಯದ ಆದೇಶದ ಮೇರೆಗೆ ವಶಪಡಿಸಿಕೊಂಡಿದ್ದ ಸ್ವತ್ತುಗಳನ್ನು ಸಂಬಂಧಿತ ವಾರಸುದಾರರಿಗೆ ಮರು ಹಸ್ತಾಂತರ ಮಾಡಲಾಗಿದೆ.
ಈ ಸಂದರ್ಭದಲ್ಲಿ ತಮ್ಮ ಕಳೆದುಕೊಂಡ ಆಸ್ತಿಯನ್ನು ಮರಳಿ ಪಡೆದ ವಾರಸುದಾರರು ಪೊಲೀಸ್ ಇಲಾಖೆಯ ಕಾರ್ಯಕ್ಷಮತೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡು ಕೃತಜ್ಞತೆ ಸಲ್ಲಿಸಿದರು. ಸಾರ್ವಜನಿಕರಲ್ಲಿ ಭದ್ರತೆ ಮತ್ತು ನಂಬಿಕೆಯನ್ನು ಹೆಚ್ಚಿಸುವಲ್ಲಿ ಈ ಕ್ರಮ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಪೊಲೀಸ್ ಅಧಿಕಾರಿಗಳು ಮಾತನಾಡಿ, ಅಪರಾಧ ತಡೆಗಟ್ಟಲು ಹಾಗೂ ಅಪರಾಧಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಇಲಾಖೆ ಸದಾ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ನಾಗರಿಕರು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಒಟ್ಟಾರೆ, ಎ.ಪಿ.ಎಂ.ಸಿ ಪೊಲೀಸ್ ಠಾಣೆಯ ಈ ಕಾರ್ಯಾಚರಣೆ ಜನಸಾಮಾನ್ಯರಲ್ಲಿ ವಿಶ್ವಾಸವನ್ನು ಬಲಪಡಿಸುವುದರೊಂದಿಗೆ, ಅಪರಾಧಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದಂತಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande