

ಕೊಪ್ಪಳ, 21 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪ್ರತಿಯೊಂದು ವೃತ್ತಿಗೆ ಗೌರವ ನೀಡುತ್ತ, ಶ್ರಮ ಸಂಸ್ಕೃತಿಗೆ ಆದ್ಯತೆ ನೀಡಿ ಸಮಸಮಾಜದ ಪರಿಕಲ್ಪನೆ ನೀಡಿದ್ದೇ ಶರಣರು ಎಂದು ಚಿಂತಕಿ ಡಾ.ದಾನಮ್ಮ ಝಳಕಿ ಅವರು ಹೇಳಿದರು.
ಜಿಲ್ಲಾಡಳಿತದಿಂದ ಗವಿಮಠದ ಆವರಣದಲ್ಲಿ ನಡೆದ ಬಸವ ಜಯಂತ್ಯುತ್ಸವ ಸಮಾರಂಭದಲ್ಲಿ ಬಸವಗೋಷ್ಟಿ ನಡೆಸಿದ ಅವರು, ಶರಣರು ಕಟ್ಟಿದ ಸಮಾಜದಲ್ಲಿ ಪ್ರಜಾಪ್ರಭುತ್ವದ ಬೀಜಗಳಿವೆ. ವಚನದ ಮೂಲಕ ಶರಣರು ಸಮಾಜ ಸುಧಾರಣೆ ಮಾಡಿದರು ಎಂದು ತಿಳಿಸಿದರು.
ಜಾತಿ, ವರ್ಗ ರಹಿತ ಧರ್ಮ ಎಂದರೆ ಶರಣರು 12ನೇ ಶತಮಾನದಲ್ಲಿ ಕಟ್ಟಿದ ಲಿಂಗಾಯತ ಧರ್ಮವಾಗಿದೆ.
ಕಾಯಕದ ಪರಿಕಲ್ಪನೆ ಮೂಲಕ ಬಸವಣ್ಣನವರು ಕಾಯಕ, ವೃತ್ತಿಗೆ ವಿಶೇಷ ಗೌರವ, ಶ್ರಮಕ್ಕೆ ಗೌರವ ತಂದು ಕೊಟ್ಟರು. ಕಾಯಕ, ದಾಸೋಹ ತತ್ವದ ಮೂಲಕ ಸಮಷ್ಠಿ ಭಾವದ ಆಶಯ ಮೂಡಿಸಿದರು ಎಂದರು.
ಆಗ ಬರವಣಿಗೆ ಇರಲಿಲ್ಲ; ಮಾತಿನಿಂದ ಮಾತಿಗೆ ಆಗಿನ ವಿಚಾರ ಹಬ್ಬಿತು. ಗುರು ಎಂದರೆ ವ್ಯಕ್ತಿ ಅಲ್ಲ ಅದು ಅರಿವು ಎಂದು ತಿಳಿಸಿದರು.
ಶೋಷಿತ ವರ್ಗದ ಜನರು ಮತ್ತು ಅಲ್ಪಸಂಖ್ಯಾತರು ನೊಂದಿರುವ ಸಮಯದಲ್ಲಿ ವೈದಿಕ ಧರ್ಮದ ವಿರುದ್ಧ ಕಿಡಿಯಾಗಿ, ಹಿರಿಯರು, ಕಿರಿಯರು ಎನ್ನದೇ, ಮೇಲು ಕೀಳು ಎನ್ನದೇ ಎಲ್ಲರೂ ಒಂದೇ ಎಂದು ಸಮಾನತೆ ಸಂದೇಶವನ್ನು ಬಸವಣ್ಣನವರು ನೀಡಿದರು. ಗಂಡು ಹೆಣ್ಣು ಎಂದು ಬೇಧಭಾವ ಮಾಡಬೇಡಿ ಇಬ್ಬರು ಸಮಾನರು ಎನ್ನುವ ಸಂದೇಶ ನೀಡಿದರು. ಕಾಯಕ ಎಂಬುದು ಚೈತನ್ಯದ ಪ್ರತೀಕ. ಅದು ಆತ್ಮಗೌರವ ಮೂಡಿಸುತ್ತದೆ. ಶರಣರು ಕಾಯಕಕ್ಕೆ ಅತೀ ಹೆಚ್ಚಿನ ಮಹತ್ವ ನೀಡಿದರು. ಶರಣರು ಶ್ರಮ ಸಂಸ್ಕೃತಿಗೆ ಆದ್ಯತೆ ನೀಡಿ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದರು.
ಶರಣೆಯರು ಮೌನ ಒಡೆದ ಧ್ವನಿಗಳಾಗಿದ್ದಾರೆ. ಮೌನವಾಗಿರದೇ ಅವರು ಪ್ರಶ್ನೆ ಮಾಡಿ ಬದುಕಿದರು. ಸತ್ಯ ಶುದ್ಧ ಕಾಯಕದ ಮೂಲಕ ವೃತ್ತಿ ಗೌರವವನ್ನು 33ಕ್ಕು ಹೆಚ್ಚು ಶರಣೆಯರು ಕಾಪಾಡಿದರು. ಹೆಣ್ಣಿಗೆ ಪ್ರತ್ಯೇಕ ಸಾಧನೆ ಸಿಗಬೇಕು. ಆತ್ಮಸಾಧನೆಗೆ ಲಿಂಗ ಅಡ್ಡಬರಬಾರದು ಎಂಬುದು ಶರಣೆಯರ ಪ್ರತಿಪಾದನೆಯಾಗಿತ್ತು ಎಂದು ತಿಳಿಸಿದರು.
ನಿತ್ಯ ಜಯಂತಿಯಾಗಲಿ: ಸಮಸಮಾಜ ನಿರ್ಮಾಣದ ಆಶಯ ಹೊಂದಿದ ವಚನಗಳ ಸಂದೇಶವನ್ನು ನಾವು ನಮ್ಮ ಮಕ್ಕಳಿಗೆ ತಿಳಿಸಿ ಬೆಳೆಸೋಣ. ಬಸವ ಜಯಂತಿಯಲ್ಲಿ ನಾವೆಲ್ಲ ಈ ಸಂಕಲ್ಪ ಮಾಡಿ ಕಾರ್ಯಪ್ರವೃತ್ತರಾಗುವ ಮೂಲಕ ಬಸವ ಜಯಂತಿಯನ್ನು ನಿತ್ಯ ಜಯಂತಿಯಾಗಿಸೋಣ ಎಂದು ಅವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್