


ಬಳ್ಳಾರಿ, 20 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಹಾಮಾನವತವಾದಿ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಜನ್ಮದಿನೋತ್ಸವದ ಅಂಗವಾಗಿ ನಗರದ ಹೆಚ್.ಆರ್.ಗವಿಯಪ್ಪ ವೃತ್ತದ ಬಳಿಯಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಿಲ್ಲಾಡಳಿತದಿಂದ ಗೌರವ ನಮನ ಸಮರ್ಪಿಸಿ, ಶ್ರದ್ಧಾಭಕ್ತಿಯಿಂದ ಪುಷ್ಪನಮನ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು, 12ನೇ ಶತಮಾನದಲ್ಲೇ ಸಮಾನತೆ, ಏಕತೆ ಮತ್ತು 'ಕಾಯಕವೇ ಕೈಲಾಸ' ಎಂಬ ಉದಾತ್ತ ತತ್ವಗಳನ್ನು ಸಾರಿದ ಮಹಾನ್ ಚೇತನರು. ಬಸವಣ್ಣನವರ ಹಾದಿಯಲ್ಲಿ ಇಂದು ನಾವೆಲ್ಲರೂ ಸಾಗಬೇಕಿದೆ ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಮಾತನಾಡಿ, ವಿಶ್ವಗುರು, ಶ್ರೇಷ್ಠ ವಚನಕಾರ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲ್ಪಟ್ಟಿರುವ ಬಸವಣ್ಣನವರ ಜನ್ಮ ದಿನೋತ್ಸವವನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ಎಲ್ಲರನ್ನು ಒಂದೇ ಎಂಬ ಏಕತಾ ಭಾವಕ್ಕೆ ತಂದ ಪುಣ್ಯಾತ್ಮರು ಎಂದು ಹೇಳುತ್ತ, ಜಿಲ್ಲೆಯ ಜನತೆಗೆ ಬಸವ ಜಯಂತಿ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ ಸೇರಿದಂತೆ ಅಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು, ಗಣ್ಯರು ಮತ್ತು ಸಾರ್ವಜನಿಕರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್