
ವಿಜಯಪುರ, 20 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ಸುಮಾರು 2 ಲಕ್ಷ 88 ಸಾವಿರ ಹುದ್ದೆಗಳು ಖಾಲಿ ಇದ್ದು, ನಿಗಮ–ಮಂಡಳಿಗಳಲ್ಲಿಯೇ ಸುಮಾರು 1 ಲಕ್ಷ ಹುದ್ದೆಗಳು ಭರ್ತಿಯಾಗದೇ ಉಳಿದಿವೆ ಎಂದು ಆರೋಪಿಸಿದರು.
ವಿಜಯಪುರದಲ್ಲಿ ವಿದ್ಯಾರ್ಥಿಗಳು ಹೋರಾಟಕ್ಕೆ ಮುಂದಾದರೂ ಪೊಲೀಸರು ಅನುಮತಿ ನೀಡಿಲ್ಲ ಎಂದು ಆಕ್ಷೇಪಿಸಿದ ಅವರು, “ಯಾವುದೇ ಕಾರಣಕ್ಕೂ ಹೋರಾಟವನ್ನು ನಿಲ್ಲಿಸುವುದಿಲ್ಲ. ಯುವಕರೊಂದಿಗೆ ಚರ್ಚಿಸಿ ವಿಜಯಪುರದಿಂದ ಬೆಂಗಳೂರು ಚಲೋಗೆ ಕರೆ ನೀಡುತ್ತೇವೆ” ಎಂದು ತಿಳಿಸಿದರು.
ಹೋರಾಟ ಆರಂಭವಾಗುತ್ತಿದ್ದಂತೆ ಸರ್ಕಾರದ ಪತನದ ಮೊದಲ ಹೆಜ್ಜೆಯಾಗಲಿದೆ ಎಂದು ಹೇಳಿದರು.
ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಯುವಕರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಧಕ್ಕೆ ಉಂಟಾಗಿದೆ ಎಂದು ಟೀಕಿಸಿದರು. ಹಿಂದೆ ಇಂದಿರಾ ಗಾಂಧಿ ಅವಧಿಯಲ್ಲಿ ತುರ್ತು ಪರಿಸ್ಥಿತಿ ಇದ್ದಂತೆ ಈಗ ರಾಜ್ಯದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಇನ್ನೊಂದೆಡೆ, ಹೊಸ ರಾಜಕೀಯ ಚಟುವಟಿಕೆಗಳ ಸುಳಿವು ನೀಡಿದ ಯತ್ನಾಳ್, ಮುಂದಿನ ತಿಂಗಳಲ್ಲಿ ಶುಭ ಮುಹೂರ್ತ ನೋಡಿ ಹೊಸ ರಾಜಕೀಯ ವಿಚಾರ ಆರಂಭಿಸುವುದಾಗಿ ಹೇಳಿದರು. ಮೊದಲಿಗೆ ಹಿಂದುತ್ವ ಆಧಾರಿತ ಸಭೆಯನ್ನು ಕೋಲಾರ ಜಿಲ್ಲೆಯ ವಿಘ್ನೇಶ್ವರ ದೇವಸ್ಥಾನದಿಂದ ಪ್ರಾರಂಭಿಸಿ ಬಳಿಕ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಯೋಜನೆ ಹೊಂದಿರುವುದಾಗಿ ತಿಳಿಸಿದರು.
ಹಿಂದುತ್ವ, ನಿರುದ್ಯೋಗ ಮತ್ತು ಅಭಿವೃದ್ಧಿ ಎಂಬ ಮೂರು ಪ್ರಮುಖ ಅಂಶಗಳನ್ನು ಕೇಂದ್ರಬಿಂದುವಾಗಿ ಸಭೆಗಳು ನಡೆಯಲಿದ್ದು, ಪ್ರಾದೇಶಿಕ ಪಕ್ಷ ಸ್ಥಾಪನೆ ಕುರಿತು ಜನರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು. “ಮೊದಲು ರಾಜ್ಯದ ಜನರ ಅಭಿಪ್ರಾಯ ಪಡೆಯುತ್ತೇನೆ, ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ” ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande