
ಗದಗ, 20 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜಗಜ್ಯೋತಿ ಬಸವೇಶ್ವರರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರು ವಿಶ್ವಮಾನವ. ಅವರ 'ಕಾಯಕವೇ ಕೈಲಾಸ' ಮತ್ತು 'ದಾಸೋಹ' ತತ್ವಗಳು ಇಂದಿನ ಆಧುನಿಕ ಯುಗಕ್ಕೂ ಅತ್ಯಂತ ಪ್ರಸ್ತುತವಾಗಿವೆ,ಜಗಜ್ಯೋತಿ ಬಸವಣ್ಣನವರ ತತ್ವಗಳು ಸಾರ್ವಕಾಲಿಕ ಸತ್ಯ ಅವರ ತತ್ವಗಳುನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕ ಎಸ್. ವಿ. ಸಂಕನೂರು ಹೇಳಿದರು.
ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿಂದು ಆಯೋಜಿಸಲಾಗಿದ್ದ ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಲಿಂಗ ಸಮಾನತೆ, ಜಾತಿ ಪದ್ಧತಿ ನಿರ್ಮೂಲನೆ ಮತ್ತು ಶೋಷಣೆ ಮುಕ್ತ ಸಮಾಜದ ಕನಸು ಕಂಡವರು ಬಸವಣ್ಣನವರು. ಅನುಭವ ಮಂಟಪದ ಮೂಲಕ ಅವರು ಪ್ರಜಾಪ್ರಭುತ್ವದ ಅಡಿಪಾಯ ಹಾಕಿದರು.
ನಾವು ಕೇವಲ ಅವರ ಫೋಟೋಗಳಿಗೆ ಪೂಜೆ ಮಾಡಿದರೆ ಸಾಲದು, ಅವರ ವಚನಗಳಲ್ಲಿನ ಸಾರವನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಎಂದು ಕರೆ ನೀಡಿದರು. ಇಂದಿನ ಯುವ ಪೀಳಿಗೆಗೆ ಶರಣರ ವಿಚಾರಧಾರೆಗಳನ್ನು ತಲುಪಿಸುವ ಅಗತ್ಯವಿದೆ. ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆ ನೆಲೆಸಬೇಕಾದರೆ ಬಸವ ಪಥವೇ ನಮಗೆ ದಾರಿದೀಪ, ಎಂದು ಸಂಕನೂರು ಅಭಿಪ್ರಾಯಪಟ್ಟರು.
ಕಾಯಕವೇ ಕೈಲಾಸ ಎಂಬ ಮಂತ್ರದೊಂದಿಗೆ ಸಮಾಜದಲ್ಲಿ ಸಮಾನತೆ ಮತ್ತು ಶ್ರಮದ ಗೌರವವನ್ನು ಎತ್ತಿ ಹಿಡಿದ ಜಗಜ್ಯೋತಿ ಬಸವಣ್ಣನವರ ವಿಚಾರಧಾರೆಗಳು ಕೇವಲ ಒಂದು ಕಾಲಕ್ಕೆ ಸೀಮಿತವಾಗಿಲ್ಲ, ಅವು ಅಂದಿಗೂ, ಇಂದಿಗೂ ಮತ್ತು ಎಂದಿಗೂ ಪ್ರಸ್ತುತ ಎಂದು ಜಿಲ್ಲಾಧಿಕಾರಿ ಸಿ ಎನ್. ಶ್ರೀಧರ ತಿಳಿಸಿದರು.
ಕಾಯಕವೇ ಕೈಲಾಸ' ಎಂದು ಬೋಧಿಸುವ ಮೂಲಕ ಕೆಲಸದಲ್ಲಿ ದೇವರನ್ನು ಕಾಣುವಂತೆ ಪ್ರೇರೇಪಿಸಿದರು. ದುಡಿದು ತಿನ್ನುವ ಸಂಸ್ಕೃತಿ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂಬುದು ಅವರ ದೃಢ ನಂಬಿಕೆಯಾಗಿತ್ತು, ಸಮಾಜದ ವರ್ಗೀಕರಣದ ವಿರುದ್ಧ ಧ್ವನಿ ಎತ್ತಿದ ಬಸವಣ್ಣನವರು ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ, ಅಂದಿನ ಸಮಾಜದಲ್ಲಿದ್ದ ವೃತ್ತಿ ಆಧಾರಿತ ಮೇಲು-ಕೀಳು ಮತ್ತು ವರ್ಗೀಕರಣದ ವಿರುದ್ಧ ಹೋರಾಡಿದರು. ಪ್ರತಿಯೊಂದು ವೃತ್ತಿಯೂ ತನ್ನದೇ ಆದ ವಿಶಿಷ್ಟತೆ ಮತ್ತು ಗೌರವವನ್ನು ಹೊಂದಿದೆ ಎಂದು ಅವರು ಸಾರಿದರು.
ಮನುಷ್ಯ ಹುಟ್ಟುವಾಗ ಏನನ್ನೂ ತರುವುದಿಲ್ಲ, ಹೋಗುವಾಗ ಏನನ್ನೂ ಒಯ್ಯುವುದಿಲ್ಲ. ಈ ಸತ್ಯವನ್ನು ಅರಿತು ಸಮಾಜದಲ್ಲಿ ಮಾನವೀಯತೆ ಮತ್ತು ಸಮಾನತೆ ಹಾಗೂ ಸಾಮರಸ್ಯವನ್ನು ಬೆಳೆಸಲು ಅವರು ಶ್ರಮಿಸಿದರು. ಮನುಷ್ಯತ್ವವನ್ನು ಪಾಲಿಸುವ ಪ್ರತಿಯೊಬ್ಬರಿಗೂ ಬಸವಣ್ಣನವರು ಮಹಾಗುರು ಎಂದು ಸ್ಮರಿಸಲಾಯಿತು ದಾನ ಮತ್ತು ಹಂಚಿ ಬಾಳುವ ಗುಣ ನಮ್ಮಲ್ಲಿ ಇರುವುದನ್ನು ಇತರರೊಂದಿಗೆ ಹಂಚಿಕೊಳ್ಳುವ 'ದಾನ'ದ ಗುಣವು ಜೀವನದಲ್ಲಿ ನೆಮ್ಮದಿಯನ್ನು ನೀಡುತ್ತದೆ. ಸ್ವಾರ್ಥವನ್ನು ಬಿಟ್ಟು, ಅವಶ್ಯಕತೆ ಇರುವವರಿಗೆ ಸಹಾಯ ಮಾಡುವುದೇ ನಿಜವಾದ ಸುಖ ಎಂದು ಬಸವಣ್ಣನವರ ತತ್ವಗಳು ನಮಗೆ ಕಲಿಸಿಕೊಡುತ್ತವೆ ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಇಡೀ ಮನುಕುಲದ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ.
ನಮ್ಮ ದೈನಂದಿನ ಜೀವನದ ಧಾವಂತದಲ್ಲಿ ಮನುಷ್ಯತ್ವವನ್ನು ಮರೆಯುತ್ತಿರುವ ಈ ಸಂದರ್ಭದಲ್ಲಿ, ಬಸವಣ್ಣನವರ ವಚನಗಳು ಮತ್ತು ಅವರ ಹಾದಿ ನಮಗೆ ದಾರಿದೀಪವಾಗಬೇಕಿದೆ. ಸಮಸಮಾಜದ ನಿರ್ಮಾಣಕ್ಕೆ ಅವರ ಹೆಜ್ಜೆಗುರುತುಗಳನ್ನು ಅನುಸರಿಸುವುದು ತುಂಬಾ ಮುಖ್ಯ ಎಂದರು.
ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕರಾದ ಸೋಮಶೇಖರ ಕನಕಾಚಲ ಮಾತನಾಡಿ ಜಗಜ್ಯೋತಿ ಬಸವೇಶ್ವರರು ಕೇವಲ ಒಂದು ಜಾತಿಗೆ ಅಥವಾ ಧರ್ಮಕ್ಕೆ ಸೀಮಿತವಾದವರಲ್ಲ, ಅವರು ಇಡೀ ಮಾನವಕುಲದ ಆಸ್ತಿ. ಅವರ ವಚನಗಳ ಸಾರ ಮತ್ತು ತತ್ವಗಳು ಇಂದಿನ ಆಧುನಿಕ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ, ಎಂದು ಉಪನ್ಯಾಸಕ ಸೋಮಶೇಖರ ಕನಕಾಚಲ ಅವರು ಹೇಳಿದರು.
ಬಸವಣ್ಣನವರು ೧೨ನೇ ಶತಮಾನದಲ್ಲೇ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದವರು ಬಸವಣ್ಣನವರು. 'ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ' ಎಂದು ಹೇಳುವ ಮೂಲಕ ವಿಶ್ವಬಂಧುತ್ವದ ಸಂದೇಶ ಸಾರಿದರು.ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಅಡಿಪಾಯ ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕಾಯಕವೇ ಕೈಲಾಸ ಎಂಬ ತತ್ವವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ಎಂದರು.
ಇಂದಿನ ಯುವ ಪೀಳಿಗೆಯು ಬಸವಣ್ಣನವರ ವಚನಗಳನ್ನು ಕೇವಲ ಓದುವುದಲ್ಲದೆ, ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ ವ್ಯವಸ್ಥೆ, ಅಸಮಾನತೆ ತೊಲಗಿ ಸುಂದರ ಸಮಾಜ ನಿರ್ಮಾಣವಾಗಬೇಕಾದರೆ ಬಸವ ತತ್ವವೇ ದಾರಿದೀಪ ಎಂದು ಅವರು ಪ್ರತಿಪಾದಿಸಿ ಉಪನ್ಯಾಸ ನೀಡಿದರು.
ಪ್ರಸಾರ ಸುತಾರ ಹಾಗೂ ಗುರುನಾಥ ಸುಂದರ ವಚನ ಗಾಯನ ಪ್ರಸ್ತುತ ಪಡಿಸಿದರು. ವೀರಣ್ಣ ಅಂಗಡಿ ಮತ್ತು ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ .ವ್ಹಿ. ಬಳ್ಳಾರಿ ಸರ್ವರನ್ನು ಸ್ವಾಗತಿಸಿದರು ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.
ಡಾ.ಗಿರೀಜಾ ಹಸವಿ ಅವರ ಬರೆದ ಬಸವ ಚೇತನ ಎಂಬ ಗ್ರಂಥವನ್ನು ವಿಧಾನ ಪರಿಷತ್ ಶಾಸಕ ಡಾ.ಎಸ್. ವಿ. ಸಂಕನೂರು, ಜಿಲ್ಲಾಧಿಕಾರಿ ಸಿ ಎನ್. ಶ್ರೀಧರ ತ್ರಿವಿಧ ದಾಸೋಹಿ ಜಗದ್ಗುರು ಶ್ರೀ ಮನ್ನಿರಂಜನ ಡಾ.ತೊಂಟದ ಸಿದ್ದರಾಮ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಗ್ರಂಥ ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಬಿ ಬಿ ಅಸೂಟಿ, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ. ಕೆ.ಆರ್., ಉಪವಿಭಾಗಧಿಕಾರಿ ಗಂಗಪ್ಪ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ, ಜಿ ಪಂ ಉಪಕಾರ್ಯದರ್ಶಿ ಸಿ. ಆರ್. ಮುಂಡರಗಿ, ಎಸ್.ಎನ್ ಬಳ್ಳಾರಿ, ವಿನಾಯಕ ಮಾನ್ವೆ ಸೇರಿದಂತೆ ಸಮಾಜದ ಗಣ್ಯರು, ಮುಖಂಡರುಗಳು, ಎಲ್ಲಾ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಆವರಣದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರರ ಪ್ರತಿಮೆಗೆ ಗೌರವ ಮಾಲಾರ್ಪಣೆಯೊದಿಂಗೆ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್ ಚಾಲನೆ ನೀಡಿದರು. “ಕರ್ನಾಟಕದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಮೆರವಣಿಗೆಯು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದಿಂದ ಪ್ರಾರಂಭವಾಗಿ ಮಹೇಂದ್ರಕರ ಸರ್ಕಲ್, ಟಾಂಗ ಕೂಟ, ಬಸವೇಶ್ವರ ವೃತ್ತ, ಕೆ. ಎಚ್. ಪಾಟೀಲ್ ವೃತ್ತ, ಭೂಮರೆಡ್ಡಿ ಸರ್ಕಲ್, ರೋಟರಿ ಸರ್ಕಲ್ ಮಾರ್ಗವಾಗಿ ಶ್ರೀ ಜಗದ್ದುರು ತೊಂಟಾದರ್ಯ ಸಂಸ್ಥಾನ ಮಠದ ಆವರಣದವರೆಗೆ ಮೆರವಣಿಗೆ ಬಂದು ತಲುಪಿತು.
ಹಿಂದೂಸ್ತಾನ್ ಸಮಾಚಾರ್ / lalita MP