
ಬಾಗಲಕೋಟೆ, 20 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಅಬಕಾರಿ ಸಚಿವರ ತವರ ಜಿಲ್ಲೆ ಬಾಗಲಕೋಟೆಯಲ್ಲಿ ಅಕ್ರಮ ಮದ್ಯ ಮಾರಾಟದ ಜಾಲ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಬೆಳಿಗ್ಗೆ 6 ಗಂಟೆಯಲ್ಲೇ ಮದ್ಯ ವಿತರಣೆ ನಡೆಯುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸಣ್ಣ ವ್ಯಾಪಾರಿಗಳಿಗೆ ಹಪ್ತಾ ಕಾಟವಿದ್ದರೆ, ಕೆಲವು ಪ್ರಭಾವಿ ವ್ಯಕ್ತಿಗಳಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಈ ಪ್ರಕರಣದಲ್ಲಿ ಆಶ್ಚರ್ಯಕರ ಬೆಳವಣಿಗೆಯೆಂದರೆ, ಒಬ್ಬ ಪತ್ರಕರ್ತನೂ ಈ ಅಕ್ರಮ ಜಾಲದಲ್ಲಿ ಭಾಗಿಯಾಗಿರುವುದಾಗಿ ಮಾಹಿತಿ ಹೊರಬಿದ್ದಿದೆ. ಮಾಧ್ಯಮ ಕ್ಷೇತ್ರದ ನಂಬಿಕೆಗೂ ಧಕ್ಕೆಯಾದ ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಅಕ್ರಮ ಚಟುವಟಿಕೆಗಳ ಸುಳಿವುಗಳು ಸಿಕ್ಕಿದ್ದು, ಸ್ಥಳೀಯ ಅಧಿಕಾರಿಗಳ ಪಾತ್ರದ ಮೇಲೂ ಅನುಮಾನ ವ್ಯಕ್ತವಾಗಿದೆ. ಹಪ್ತಾ ಹಣದ ಹರಿವು ಎಲ್ಲಿಗೆ ತಲುಪುತ್ತಿದೆ? ಯಾರ ಆಶ್ರಯದಲ್ಲಿ ಈ ದಂಧೆ ನಡೆಯುತ್ತಿದೆ? ಎಂಬ ಪ್ರಶ್ನೆಗಳು ಎದ್ದಿವೆ. ಸ್ಥಳೀಯರು ತಕ್ಷಣವೇ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಮತ್ತು ಸಂಬಂಧಿತ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದೇ ಎಂಬುದು ಕಾದು ನೋಡಬೇಕಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande