
ವಿಜಯಪುರ, 20 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 17ನೇ ಘಟಿಕೋತ್ಸವವು ನಾಳೆ ಬೆಳಿಗ್ಗೆ 11.30ಕ್ಕೆ ಜ್ಞಾನಶಕ್ತಿ ಆವರಣದ ಕ್ರೀಡಾಂಗಣದಲ್ಲಿ ವಿಶೇಷವಾಗಿ ನಿರ್ಮಿಸಲಾದ ಸಭಾಂಗಣದಲ್ಲಿ ನಡೆಯಲಿದೆ ಎಂದು ಕುಲಪತಿ ಡಾ. ವಿಜಯಾ ಕೋರಿಶೆಟ್ಟಿ ತಿಳಿಸಿದರು.
ಘಟಿಕೋತ್ಸವದಲ್ಲಿ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರೊ. ಉಜ್ವಲಾ ಚಕ್ರದೇವ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ. ಜಾನಪದ ಕ್ಷೇತ್ರದಲ್ಲಿ ಪಾರ್ವತೆವ್ವ ಸಿದ್ದಪ್ಪ ಹೊಂಗಲ್, ಸಾಹಿತ್ಯ–ಶಿಕ್ಷಣ ಕ್ಷೇತ್ರದಲ್ಲಿ ಡಾ. ಸಂಗೀತಾ ಎನ್ ಕಟ್ಟಿಮನಿ ಹಾಗೂ ಉದ್ಯಮ–ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಆಶಾದೇವಿ ಜಗದೀಶ ಗುಡಗುಂಟಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ.
ಒಟ್ಟು 13,441 ವಿದ್ಯಾರ್ಥಿನಿಯರು ಪದವಿ ಪಡೆಯಲಿದ್ದು, 86 ಮಂದಿ ಪಿಎಚ್.ಡಿ ಪದವಿ, 1,116 ಮಂದಿ ಸ್ನಾತಕೋತ್ತರ ಪದವಿ ಹಾಗೂ 12,325 ಮಂದಿ ಸ್ನಾತಕ ಪದವಿ ಪಡೆಯಲಿದ್ದಾರೆ. 70 ವಿದ್ಯಾರ್ಥಿನಿಯರಿಗೆ 58 ಚಿನ್ನದ ಪದಕ ಮತ್ತು 12 ನಗದು ಪುರಸ್ಕಾರಗಳನ್ನು ಪ್ರದಾನ ಮಾಡಲಾಗುತ್ತದೆ.
ಘಟಿಕೋತ್ಸವವನ್ನು ಯೂಟ್ಯೂಬ್ ಮೂಲಕ ಲೈವ್ ಪ್ರಸಾರ ಮಾಡಲಾಗುತ್ತಿದ್ದು, ರಾಜ್ಯದಾದ್ಯಂತ ಇರುವ ಸಂಲಗ್ನ ಕಾಲೇಜುಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಆಹ್ವಾನಿತರು ಸಮಯಕ್ಕೆ ಸರಿಯಾಗಿ ಆಗಮಿಸಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
ವಿಶೇಷ ಸಾಧನೆ:
ಸಬಾ ಮಹ್ಮದ ರಫಿಕ್ ಕುಡಚಿ (ಎಂ.ಎ ಸಮಾಜಶಾಸ್ತ್ರ) 5 ಚಿನ್ನದ ಪದಕ, ರೇಖಾ ದೊಡವಾಡ (ಎಂ.ಎ ಕನ್ನಡ) 3 ಚಿನ್ನದ ಪದಕ ಹಾಗೂ 2 ನಗದು ಪುರಸ್ಕಾರ, ಗೀತಾ ಸಿ.ಕಾಟಿ (ಅರ್ಥಶಾಸ್ತ್ರ) ಮತ್ತು ಶಹಿಸ್ತಾ ತಜೀನ್ ಮಳ್ಳಿ (ಆಹಾರ ಸಂಸ್ಕರಣೆ) ತಲಾ 3 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande