
ಹಾವೇರಿ, 19 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೇವರನ್ನು ನಂಬಿ, ಆದರೆ ಮೂಢನಂಬಿಕೆಗಳನ್ನು ತ್ಯಜಿಸಿ. ಮಾನವ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಪಾಲುದಾರರಾಗಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ನಿಟ್ಟೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ 50ನೇ ವರ್ಷದ ಸುವರ್ಣ ಮಹೋತ್ಸವ, ಶ್ರೀ ಭಕ್ತ ಕನಕದಾಸರ ಮಹಾದ್ವಾರದ ಉದ್ಘಾಟನೆ ಹಾಗೂ ಧರ್ಮಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಿಟ್ಟೂರಿನ ಬೀರಲಿಂಗೇಶ್ವರ ದೇವಸ್ಥಾನಕ್ಕೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಈ ದೇವಾಲಯ ನಿಟ್ಟೂರಿಗೆ ಮಾತ್ರ ಸೀಮಿತವಾಗಿಲ್ಲ. “ದೇವನೊಬ್ಬ, ನಾಮ ಹಲವು” ಎಂಬ ಭಾವನೆಯನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸರ್ವಜನಾಂಗದ ಶಾಂತಿಯ ತೋಟವಾಗಲಿ ನಾಡು
ನಾಡು ಮತ್ತು ದೇಶವು ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂದು ಗೌತಮ ಬುದ್ಧ, ಬಸವಣ್ಣ, ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕುವೆಂಪು ಬಯಸಿದ್ದರು. ಅದೇ ಆಶಯವನ್ನು ಸರ್ಕಾರವೂ ಪಾಲಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ನಿಟ್ಟೂರಿನ ಸಾಮರಸ್ಯಕ್ಕೆ ಸುವರ್ಣ ಮಹೋತ್ಸವ ಸಾಕ್ಷಿ
ಕೇವಲ 13 ಕುರುಬ ಕುಟುಂಬಗಳಿರುವ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಾಲಯದ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿರುವುದು ನಿಟ್ಟೂರಿನ ಸಾಮರಸ್ಯ ಮತ್ತು ಸಹಬಾಳ್ವೆಗೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ದೇವರ ನಂಬಿಕೆ ಇರಲಿ, ಮೂಢನಂಬಿಕೆ ಬೇಡ
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವು ಸಂವಿಧಾನದ ಮೂಲ ಸ್ತಂಭಗಳಾಗಿವೆ. ದೇವರ ಪೂಜೆ ಮಾಡಬೇಕು, ಆದರೆ ಮೂಢನಂಬಿಕೆಗಳನ್ನು ಬೆಳೆಸಿಕೊಳ್ಳಬಾರದು ಎಂದು ಸಿಎಂ ಹೇಳಿದರು.
ಬಸವಣ್ಣ ಅವರು ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ್ದರು. ಈ ವಿಚಾರವನ್ನು ಸಮಾಜ ಸ್ಮರಿಸಬೇಕು ಎಂದು ಹೇಳಿದ ಸಿದ್ದರಾಮಯ್ಯ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯದ ತಳಹದಿಯ ಮೇಲೆಯೇ ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗುತ್ತದೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ ಎಂದು ಉಲ್ಲೇಖಿಸಿದರು.
ಸಮಾನತೆಯ ಆಶಯದಿಂದಲೇ ಸರ್ಕಾರ ಭಾಗ್ಯ ಮತ್ತು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು.
ಧರ್ಮಗಳು ಪ್ರೀತಿಯ ಸಂದೇಶ ನೀಡುತ್ತವೆ
ಇಸ್ಲಾಂ, ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮಗಳು ಜನರನ್ನು ಪ್ರೀತಿಸುವುದನ್ನು ಬೋಧಿಸುತ್ತವೆ. ಪರಸ್ಪರ ಪ್ರೀತಿ ಮತ್ತು ಗೌರವವಿದ್ದಾಗ ಮಾತ್ರ ಮಾನವ ಸಮಾಜ ನಿರ್ಮಾಣ ಸಾಧ್ಯ. ಸೈದ್ಧಾಂತಿಕವಾಗಿ ವಿರೋಧಿಗಳಾದರೂ ಜನರನ್ನು ಪ್ರೀತಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಕನಕದಾಸ, ಬಸವಣ್ಣನ ತತ್ವಗಳನ್ನು ಅಳವಡಿಸಿಕೊಳ್ಳಿ
“ಕುಲದ ನೆಲೆಯನ್ನು ಬಲ್ಲಿರಾ” ಎಂದು ಪ್ರಶ್ನಿಸಿದ್ದ ಕನಕದಾಸ ಹಾಗೂ “ಇವ ನಮ್ಮವ” ಎಂದು ಹೇಳಿದ ಬಸವಣ್ಣ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಉನ್ನತ ಶಿಕ್ಷಣ ಪಡೆದವರೇ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿರುವುದು ಸಮಾಜದ ದುರಂತವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ದಯೆ, ಕರುಣೆ ಮತ್ತು ಧರ್ಮವೇ ಜೀವನದ ಮೂಲವಾಗಬೇಕು ಎಂಬ ಬಸವಣ್ಣನ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ತಿಳಿಸಿದರು.
ನಾನು ಬಸವಣ್ಣನ ಅನುಯಾಯಿ
ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದೆ. “ಸರ್ವಜನಾಂಗದ ಶಾಂತಿಯ ತೋಟ” ಎಂಬ ಆಶಯವನ್ನು ಸಾಕಾರಗೊಳಿಸುವ ಉದ್ದೇಶ ಸರ್ಕಾರಕ್ಕಿದ್ದು, ತಾನೂ ಬಸವಣ್ಣನ ಅನುಯಾಯಿಯೇ ಎಂದು ಮುಖ್ಯಮಂತ್ರಿ ಹೇಳಿದರು.
ಮಳೆ ಕೊರತೆ ಎದುರಿಸಲು ಮುಂಜಾಗ್ರತೆ
ಈ ಬಾರಿ ಮಳೆ ಕೊರತೆಯಾಗುವ ಸಾಧ್ಯತೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು.
ರಾಣೇಬೆನ್ನೂರಿನ ವರ್ತುಲ ರಸ್ತೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ್, ಪ್ರಕಾಶ್ ಕೋಳಿವಾಡ, ಯಾಸಿರ್ ಖಾನ್ ಪಠಾಣ್, ಯು.ಬಿ. ಬಣಕಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa