
ಬಾಗಲಕೋಟೆ, 19 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಇಲಕಲ್ ನಗರದಲ್ಲಿನ ಕೆ.ಇ.ಬಿ. ಕಾಲೋನಿಯಲ್ಲಿ ಮಧ್ಯರಾತ್ರಿ ಮುಸುಕುದಾರಿ ಕಳ್ಳರು ವಕೀಲರಾದ ವಿ ಬಿ ದಮ್ಮೂರಮಠ ಅವರ ಮನೆಯಲ್ಲಿ ನುಗ್ಗಿ ಶೋಧ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ಮಧ್ಯರಾತ್ರಿ ವೇಳೆ ಮನೆ ಸುತ್ತಮುತ್ತ ಸಂಚರಿಸಿದ ಕಳ್ಳರು ಬಳಿಕ ಮನೆಯೊಳಗೆ ಪ್ರವೇಶಿಸಿ ಅಲಮಾರಿಗಳು ಹಾಗೂ ಕೊಠಡಿಗಳನ್ನು ತಪಾಸಣೆ ನಡೆಸಿದ್ದಾರೆ. ಮನೆಯವರು ನಿದ್ರೆಯಲ್ಲಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದ್ದು, ಕಳ್ಳರ ಚಲನವಲನಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಇಲಕಲ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಈ ಘಟನೆ ಬಳಿಕ ಕೆ.ಇ.ಬಿ. ಕಾಲೋನಿಯ ನಿವಾಸಿಗಳಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದ್ದು, ರಾತ್ರಿ ವೇಳೆ ಭದ್ರತೆ ಹೆಚ್ಚಿಸುವಂತೆ ಸ್ಥಳೀಯರು ಪೊಲೀಸರನ್ನು ಆಗ್ರಹಿಸಿದ್ದಾರೆ. ಸಿಸಿಟಿವಿ ವ್ಯವಸ್ಥೆಯನ್ನು ಬಲಪಡಿಸಿ, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿರಲು ನಿವಾಸಿಗಳಿಗೆ ಸಲಹೆ ನೀಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande