ಕಾಂಗ್ರೆಸ್ ವಿರುದ್ಧ ಉಲೇಮಾ ಸಂಘಟನೆ ಅಸಮಾಧಾನ
ಬೆಂಗಳೂರು, 16 ಏಪ್ರಿಲ್ (ಹಿ.ಸ.) : ಆ್ಯಂಕರ್ : ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡದಿರುವುದು ಹಾಗೂ ಮತದಾನದ ಬೆನ್ನಲ್ಲೇ ಸಮುದಾಯದ ಇಬ್ಬರು ನಾಯಕರ ವಿರುದ್ಧ ಕಾಂಗ್ರೆಸ್ ಕೈಗೊಂಡ ಶಿಸ್ತು ಕ್ರಮಕ್ಕೆ ಸಂಬಂಧಿಸಿ ಕರ್ನಾಟಕ ಉಲೇಮಾ ಸಂಘಟನೆ ತೀವ್ರ
ಕಾಂಗ್ರೆಸ್ ವಿರುದ್ಧ ಉಲೇಮಾ ಸಂಘಟನೆ ಅಸಮಾಧಾನ


ಬೆಂಗಳೂರು, 16 ಏಪ್ರಿಲ್ (ಹಿ.ಸ.) :

ಆ್ಯಂಕರ್ : ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡದಿರುವುದು ಹಾಗೂ ಮತದಾನದ ಬೆನ್ನಲ್ಲೇ ಸಮುದಾಯದ ಇಬ್ಬರು ನಾಯಕರ ವಿರುದ್ಧ ಕಾಂಗ್ರೆಸ್ ಕೈಗೊಂಡ ಶಿಸ್ತು ಕ್ರಮಕ್ಕೆ ಸಂಬಂಧಿಸಿ ಕರ್ನಾಟಕ ಉಲೇಮಾ ಸಂಘಟನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಫ್ತಿ ಇಫ್ತಿಕಾರ್ ಖಾಸ್ಮಿ, “2023ರ ವಿಧಾನಸಭೆ ಚುನಾವಣೆಯಲ್ಲಿಯೇ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಮುದಾಯದವರಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ನಾಯಕರನ್ನು ಮನವಿ ಮಾಡಿದ್ದೆವು. ಆದರೆ ಈಗ ಹಾಲಿ ಶಾಸಕರ ನಿಧನದ ಬಳಿಕ ಅವರ ಮೊಮ್ಮಗನಿಗೆ ಟಿಕೆಟ್ ನೀಡಲಾಗಿದೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ಅರ್ಹ ಅಭ್ಯರ್ಥಿಗಳಿದ್ದರೂ ಒಂದೇ ಕುಟುಂಬಕ್ಕೆ ಪದೇ ಪದೇ ಅವಕಾಶ ನೀಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಫ್ತಿ ಇಫ್ತಿಕಾರ್ ಖಾಸ್ಮಿ ಅವರು, ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹಮದ್ ವಿರುದ್ಧ ಕಾಂಗ್ರೆಸ್ ಕೈಗೊಂಡ ಶಿಸ್ತು ಕ್ರಮವನ್ನೂ ಪ್ರಶ್ನಿಸಿ, ಯಾವುದೇ ಶೋಕಾಸ್ ನೋಟಿಸ್ ನೀಡದೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು. “ಪಕ್ಷದ ವಿರುದ್ಧ ಮಾತನಾಡಿದ ಇತರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ” ಎಂದು ಅವರು ಹೇಳಿದರು.

“ನಾವು ಪಕ್ಷಕ್ಕೆ ಬೆದರಿಕೆ ಹಾಕುತ್ತಿಲ್ಲ. ಆದರೆ ಮುಸ್ಲಿಮರ ಕಳವಳಗಳನ್ನು ಕಾಂಗ್ರೆಸ್ ನಿರ್ಲಕ್ಷಿಸುತ್ತಲೇ ಹೋದರೆ ಬೆಂಬಲ ಕಳೆದುಕೊಳ್ಳುವ ಅಪಾಯವಿದೆ. ತಪ್ಪುಗಳನ್ನು ಸರಿಪಡಿಸದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಖಾಸ್ಮಿ ಎಚ್ಚರಿಕೆ ನೀಡಿದರು.

ದಾವಣಗೆರೆ ಉಪಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿಗಳಿಗೆ ಮುಸ್ಲಿಂ ನಾಯಕರು ಬೆಂಬಲ ನೀಡಿದ್ದಾರೆ ಎಂಬ ಆರೋಪಗಳನ್ನು ಅವರು ತಳ್ಳಿ ಹಾಕಿ, ಅದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಸ್ಪಷ್ಟಪಡಿಸಿದರು.

“ಒಂದು ಮಾರ್ಗ ಮುಚ್ಚಿದರೆ ಇನ್ನೂ ಹಲವು ಮಾರ್ಗಗಳಿವೆ. ಕಾಂಗ್ರೆಸ್ ಮಾತ್ರ ನಮ್ಮ ಏಕೈಕ ರಾಜಕೀಯ ಆಯ್ಕೆಯಲ್ಲ” ಎಂದು ಖಾಸ್ಮಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande