
ಬೆಂಗಳೂರು, 16 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ಇಂದು ನಡೆದ ಕರ್ನಾಟಕ ವನ್ಯಜೀವಿ ಮಂಡಳಿಯ 6ನೇ ಸಭೆಯಲ್ಲಿ, ಕಲಬುರಗಿ ಜಿಲ್ಲೆಯ ಅಲ್ಲೂರು (ಬಿ) ಗ್ರಾಮ ವ್ಯಾಪ್ತಿಯ 2,877 ಎಕರೆ ಅರಣ್ಯ ಪ್ರದೇಶವನ್ನು ಸಂರಕ್ಷಿತ ಮೀಸಲು ಅರಣ್ಯವಾಗಿ ಘೋಷಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಅಲ್ಲೂರು ಅರಣ್ಯ ಪ್ರದೇಶ ಬೆಟ್ಟಗುಡ್ಡಗಳಿಂದ ಕೂಡಿದ, ಹಚ್ಚಹಸಿರಿನ ಪ್ರದೇಶವಾಗಿದ್ದು, ಚಿರತೆ, ಜಿಂಕೆ, ಕಾಡುಹಂದಿ, ಕಾಡುಕುರಿ, ಕಾಡುಬೆಕ್ಕು, ಚಿಪ್ಪುಹಂದಿ ಹಾಗೂ ನರಿ ಸೇರಿದಂತೆ ಅನೇಕ ವನ್ಯಜೀವಿಗಳ ಸಹಜ ಆವಾಸಸ್ಥಾನವಾಗಿದೆ. ಈ ಹಿನ್ನೆಲೆಯಲ್ಲಿ, ಪರಿಸರ ಸಮತೋಲನ ಮತ್ತು ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ಈ ಪ್ರದೇಶಕ್ಕೆ ಸಂರಕ್ಷಿತ ಮೀಸಲು ಸ್ಥಾನಮಾನ ನೀಡಲು ಸಭೆ ಏಕಮತದಿಂದ ತೀರ್ಮಾನಿಸಿದೆ.
ಸಭೆಯಲ್ಲಿ, ವನ್ಯಜೀವಿ ಸಂರಕ್ಷಣಾ ಕಾಯಿದೆ, 1972ಯ ಕಲಂ 36(ಎ) ಅನ್ವಯ ಸ್ಥಳೀಯ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಯಲ್ಲಿ ಈ ವಿಷಯದ ಕುರಿತು ಚರ್ಚಿಸಿ, ಸಂರಕ್ಷಿತ ಮೀಸಲು ಘೋಷಣೆಗೆ ಗ್ರಾಮಸ್ಥರ ಸಮ್ಮತಿ ಪಡೆಯಲಾಗಿದೆ ಎಂಬುದನ್ನೂ ಗಮನಕ್ಕೆ ತರಲಾಯಿತು.
ಈ ನಿರ್ಧಾರದಿಂದ ಪ್ರದೇಶದ ಜೈವ ವೈವಿಧ್ಯತೆ ಉಳಿಯುವುದರ ಜೊತೆಗೆ, ಅಪರೂಪದ ವನ್ಯಜೀವಿಗಳ ಸುರಕ್ಷತೆಗೆ ಸಹಕಾರಿಯಾಗಲಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa