ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಹಾವೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ : ಶಿವಾನಂದ ಪಾಟೀಲ
ಸಚಿವ
Meeting


ಬೆಂಗಳೂರು, 16 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಸಚಿವ ಶಿವಾನಂದ ಪಾಟೀಲ ಅವರು ಹಾವೇರಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಗುತ್ತಿಗೆದಾರರ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ ಎಂದು ಹೇಳಿ, ಈ ವಿಷಯವನ್ನು ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಹಾವೇರಿ ಜಿಲ್ಲೆಯ 541 ಗ್ರಾಮಗಳಿಗೆ ನೀರುಣಿಸಬಲ್ಲ ತಡಸ, ಆಣೂರು ಹಾಗೂ ಹಂಸಭಾವಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ನಿಗದಿತ ಅವಧಿ ಮುಗಿದು ಎರಡು ವರ್ಷಗಳಾದರೂ ಪೂರ್ಣಗೊಳ್ಳದೆ ವಿಳಂಬವಾಗುತ್ತಿರುವುದನ್ನು ಸಚಿವರು ಸಭೆಯಲ್ಲಿ ಪ್ರಸ್ತಾಪಿಸಿದರು.

ಯೋಜನೆಗಳಿಗೆ ಶೇ.80ಕ್ಕೂ ಹೆಚ್ಚು ಹಣ ಪಾವತಿಯಾಗಿದ್ದರೂ, ಗುತ್ತಿಗೆದಾರರು ಪದೇ ಪದೇ ಅವಧಿ ವಿಸ್ತರಣೆ ಮಾಡಿಕೊಂಡು ಕಾಮಗಾರಿ ವಿಳಂಬ ಮಾಡುತ್ತಿರುವುದರಿಂದ ಜನತೆಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ ಎಂದು ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಇದೇ ವೇಳೆ, ಹಾವೇರಿ ನಗರದ ನೀರು ಪೂರೈಕೆ ಯೋಜನೆಗೆ ಕಾನೂನು ತೊಡಕುಗಳನ್ನು ಉಂಟುಮಾಡುತ್ತಿರುವ ಪ್ರಭಾವಿ ಕಂಪನಿಗಳ ವಿರುದ್ಧವೂ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಬೈರತಿ ಸುರೇಶ್ ಸಹ ಧ್ವನಿಗೂಡಿಸಿ, ಇಂತಹ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ರುದ್ರಪ್ಪ ಲಮಾಣಿ ಕೂಡ ಸಚಿವರ ಮಾತಿಗೆ ಬೆಂಬಲ ಸೂಚಿಸಿ, ಹಾವೇರಿ ನಗರದ ಕುಡಿಯುವ ನೀರಿನ ಯೋಜನೆಗೆ ಅಗತ್ಯ ಹಣಕಾಸಿನ ನೆರವು ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಸಚಿವರ ವಿವರಣೆಯನ್ನು ಆಲಿಸಿದ ಸಿದ್ದರಾಮಯ್ಯ, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಎಷ್ಟೇ ಪ್ರಭಾವಿ ಗುತ್ತಿಗೆದಾರರಿದ್ದರೂ ಅವರ ಗುತ್ತಿಗೆಗಳನ್ನು ತಕ್ಷಣವೇ ರದ್ದುಪಡಿಸುವಂತೆ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.

ಹಾವೇರಿ ಜಿಲ್ಲೆಯ ಜನತೆ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಭರವಸೆ ನೀಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande