ಕ್ಷೇತ್ರ ಮರುವಿಂಗಣೆ ; ಪ್ರತಿಪಕ್ಷಗಳಿಂದ ಅನಗತ್ಯ ರಾಜಕೀಯ : ಬೊಮ್ಮಾಯಿ
ನವದೆಹಲಿ, 16 ಏಪ್ರಿಲ್ (ಹಿ.ಸ.) : ಆ್ಯಂಕರ್ : ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಪ್ರತಿಪಕ್ಷಗಳು ಅನಗತ್ಯವಾಗಿ ಉತ್ತರ ದಕ್ಷಿಣವನ್ನು ವಿಭಜಿಸುವ ಮೂಲಕ ರಾಜಕೀಯ ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ನವ ದೆಹಲಿಯಲ್ಲಿ ಸುದ್ದ
ಕ್ಷೇತ್ರ ಮರುವಿಂಗಣೆ ; ಪ್ರತಿಪಕ್ಷಗಳಿಂದ ಅನಗತ್ಯ ರಾಜಕೀಯ : ಬೊಮ್ಮಾಯಿ


ನವದೆಹಲಿ, 16 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಪ್ರತಿಪಕ್ಷಗಳು ಅನಗತ್ಯವಾಗಿ ಉತ್ತರ ದಕ್ಷಿಣವನ್ನು ವಿಭಜಿಸುವ ಮೂಲಕ ರಾಜಕೀಯ ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ನವ ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಹಿಳಾ ಮೀಸಲಾತಿ ಹಾಗೂ ಡಿಲಿಮಿಟೇಷನ್ ಬಿಲ್ ಅನ್ನು ಸರ್ವಾನುಮತದಿಂದ ಪಾಸ್ ಆಗಬೇಕೆನ್ನುವ ಬಯಕೆ ಹೊಂದಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಅವಿಸ್ಮರಣೀಯ ಗಳಿಗೆ, ಸಂವಿಧಾನದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಕೊಟ್ಟಿದ್ದರೂ ಅವರ ಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯ ನೀಡಿಲ್ಲ. ಹೀಗಾಗಿ ಮಹಿಳಾ ಮೀಸಲಾತಿ ಬಿಲ್ ಮಂಡನೆಯಾಗಿದೆ. ಈ ಬಿಲ್ ಜಾರಿಗೆ ಕಳೆದ ಮೂವತ್ತು ವರ್ಷಗಳಿಂದ ಪ್ರಯತ್ನ ನಡೆಯುತ್ತಲೇ ಇದೆ. ಈಗ ಅಂತಿಮ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಇದು ನಮಗೆ ಸ್ಮರಣೀಯ ಸಮಯ. ಇದು ಸರ್ವಾನುಮತದಿಂದ ಜಾರಿಗೆ ಬರಬೇಕೆನ್ನುವುದು ನಮ್ಮ ಬಯಕೆ ಆದರೆ, ಪ್ರತಿಪಕ್ಷಗಳು ಇದರಲ್ಲಿ ರಾಜಕೀಯ ಮಾಡುತ್ತಿವೆ. ಅನಗತ್ಯವಾಗಿ ಉತ್ತರ ದಕ್ಷಿಣವನ್ನು ವಿಭಜಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

ವಿಧೆಯಕದಲ್ಲಿ ಬಹಳ ಸ್ಪಷ್ಟವಾಗಿದೆ ಈಗಿರುವ ಲೋಕಸಭಾ ಕ್ಷೇತ್ರಗಳ ಶೇ 50% ರಷ್ಟು ಅನುಪಾದಲ್ಲಿ ಹೆಚ್ಚಳ ಆಗುತ್ತದೆ. ಈಗ ಆಯಾ ರಾಜ್ಯಗಳಲ್ಲಿ ಇರುವ ಕ್ಷೇತ್ರಗಳ ಶೇ 50% ಸ್ಥಾನಗಳು ಹೆಚ್ಚಾಗಲಿವೆ. ಆದ್ದರಿಂದ ಲೋಕಸಭಾ ಸ್ಥಾನಗಳಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. 2011 ರ ಜನಗಣತಿ ಪರಿಗಣಿಸುತ್ತಿರುವುದು ಪ್ರತಿಯೊಂದು ರಾಜ್ಯವೂ ಅವರದೇ ಆದ ಜನಸಂಖ್ಯೆಯನ್ನು ಹೊಂದಿವೆ. ಪ್ರತಿ ಲೋಕ ಸಭಾ ಕ್ಷೇತ್ರದಲ್ಲಿ ಎಷ್ಟು ಜನಸಂಖ್ಯೆಗೆ ಒಂದು ಕ್ಷೇತ್ರ ಇರಬೇಕು ಎನ್ನುವುದು ಪ್ರತಿಯೊಂದು ರಾಜ್ಯದ ಮೇಲೆ ನಿರ್ಧಾರವಾಗುತ್ತದೆ. ಅದಕ್ಕೆ 2011 ರ ಜನಗಣತಿ ಪರಿಗಣಿಸಲಾಗುತ್ತಿದೆ. ಇದು ಬಹಳ ಸ್ಪಷ್ಟವಾಗಿದೆ. ಇದು ಬಿಲ್ ನಲ್ಲಿ ಮುದ್ರಿತವಾಗಿಲ್ಲ ಎನ್ನುವುದು ಪ್ರತಿಪಕ್ಷಗಳ ವಾದ, ಅದನ್ನು ಬಿಲ್ ನಲ್ಲಿ ಮುದ್ರಿಸುವುದಿಲ್ಲ, ಡಿಲಿಮಿಟೇಷನ್ ಕಮಿಷನ್ ರಚನೆ ಮಾಡಿದ ಮೇಲೆ ಅದೆಲ್ಲವನ್ನು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ನಿರ್ಧರಿಸಲಾಗುತ್ತದೆ ಎಂದು ಹೇಳಿದರು.

2008 ರಲ್ಲಿ ಡಿಲಿಮಿಟೇಷನ್ ಮಾಡಿದಾಗ 543 ಸೀಟುಗಳಿಗೆ ಸೀಮಿತವಾಗಿಟ್ಟುಕೊಂಡು ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದ್ದಾರೆ. ಅದು ಡಿಲಿಮಿಟೇಷನ್ ಸಮಿತಿಯಲ್ಲಿ ನಿರ್ಧರಿಸಲಾಗಿತ್ತು. ಮಸೂದೆಯಲ್ಲಿ ಅಲ್ಲ. ಪ್ರತಿಪಕ್ಷಗಳು ಅನಗತ್ಯವಾಗಿ ಸುಳ್ಳು ಹೇಳುವ ಮೂಲಕ ರಾಜಕಾರಣ ಮಾಡುತ್ತಿವೆ ಎಂದರು.

ತಮಿಳುನಾಡು ಮುಖ್ಯಮಂತ್ರಿ ಕೆಟ್ಟ ರಾಜಕಾರಣ :

ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮಿಳು ನಾಡು ಮುಖ್ಯಮಂತ್ರಿ ಒಂದು ಹೆಜ್ಜೆ ಮುಂದೆ ಹೋಗಿ ಕಪ್ಪು ಬಟ್ಟೆ ತೋರಿಸುವ ಮೂಲಕ ಕೆಟ್ಟ ರಾಜಕಾರಣಕ್ಕೆ ಮುನ್ನಡಿ ಇಟ್ಟಿದ್ದಾರೆ. ಡಿಎಂಕೆಯವರು ಚುನಾವಣೆ ದೃಷ್ಟಿಯಿಂದ ಪ್ರಾದೇಶಿಕ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುವುದು ಸರಿಯಲ್ಲ. ಜನಗಣತಿ ಮುಗಿದ ಮೇಲೆ ಡಿಲಿಮಿಟೇಷನ್ ಮಾಡಿದರೆ ದಕ್ಷಿಣಕ್ಕೆ ಅನ್ಯಾಯವಾಗುತ್ತದೆ. ಅದಕ್ಕೆ ಪ್ರತಿಪಕ್ಷಗಳೇ ಕಾರಣವಾಗಲಿವೆ. ಮುಂದಾಗುವ ಪರಿಣಾಮವನ್ನು ಅರಿತು ಈಗ ತೀರ್ಮಾನ ಮಾಡಬೇಕು ಎಂದು ಹೇಳಿದರು.

ಮಹಿಳಾ ಮೀಸಲಾತಿ ವಿಧೇಯಕ ಈಗಾಗಲೇ ಎರಡೂ ಸದನಗಳಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಅದನ್ನು 2034 ರಿಂದ ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. ಈಗ ಅದನ್ನು 2029 ರಿಂದ ಜಾರಿಗೆ ತರಲು ಬಿಲ್ ಮಂಡನೆ ಮಾಡಲಾಗಿದೆ. ಕ್ಷೇತ್ರ ಮರುವಿಂಗಡಣೆ ಜನಸಂಖ್ಯೆ ಆಧಾರದ ಮೇಲೆ ಆಗುತ್ತಿಲ್ಲ. ಪ್ರತಿ ರಾಜ್ಯದ ಈಗಿರುವ ಸ್ಥಾನಗಳ ಶೇ 50% ರಷ್ಟು ಹೆಚ್ಚಳವಾಗುತ್ತವೆ. ಹೀಗಾಗಿ ಜನಸಂಖ್ಯೆ ಆಧಾರದಲ್ಲಿ ಡಿಲಿಮಿಟೇಷನ್ ಆಗುತ್ತಿದೆ ಎನ್ನುವುದರಲ್ಲಿ ಅರ್ಥವಿಲ್ಲ. ಉದಾಹರಣೆಗೆ ಕರ್ನಾಟಕದಲ್ಲಿ 2011 ರಲ್ಲಿ 5 ಕೋಟಿ ಜನಸಂಖ್ಯೆ ಇತ್ತು. ಆ 5 ಕೋಟಿ ಜನರನ್ನು 42 ಸ್ಥಾನಗಳಿಗೆ ಹಂಚಿಕೆ ಮಾಡಲು ಡಿಲಿಮಿಟೇಷನ್ ಮಾಡಲಾಗುತ್ತದೆ ಎಂದು ಹೇಳಿದರು.

2023 ರಲ್ಲಿ ಮಹಿಳಾ ಮೀಸಲಾತಿ ಬಿಲ್ ತಂದಾಗಲೇ ಕ್ಷೇತ್ರಗಳ ಮರು ವಿಂಗಡಣೆ ಮಾಡಬಹುದಿತ್ತಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆಗ ಮುಂದಿನ ಜನಗಣತಿ ನಂತರ ಮಹಿಳಾ ಮೀಸಲಾತಿ ಜಾರಿ ಮಾಡಬೇಕೆಂದು ತೀರ್ಮಾನಿಸಲಾಗಿತ್ತು. 2030 ಕ್ಕೆ ಜನಗಣತಿ ನಡೆಯುತ್ತದೆ ಎಂದು ತೀರ್ಮಾನಿಸಿ 2034 ಕ್ಕೆ ಜಾರಿ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಈಗ 2026 ಕ್ಕೆ ಈಗ ಜನಗಣತಿ ನಡೆಯುತ್ತಿದೆ. 2029 ಕ್ಕೆ ಮಹಿಳಾ ಮೀಸಲಾತಿ ಜಾರಿಯಾಗಬೇಕು ಅಂತ ಕಾಂಗ್ರೆಸ್ ನವರು ಆಗ್ರಹಿಸಿದ್ದರು. ಹೀಗಾಗಿ ಈಗ ಮಹಿಳಾ ಮೀಸಲಾತಿ ಬಿಲ್ ಮಂಡನೆ ಮಾಡಲಾಗಿದೆ ಎಂದರು.

ಬದಲಾವಣೆ ನಿರಂತರ

ವಿಧೆಯಕ ಮಂಡನೆಗೂ ಮುನ್ನ ಎಲ್ಲರೊಂದಿಗೆ ಚರ್ಚೆ ಮಾಡಲಾಗಿದೆ. ಮುಂದಿನ ಜನಗಣತಿ ನಂತರ ಆಗುವ ಅಪಾಯಗಳನ್ನು ಅರಿತು ಈಗ ಈ ಬಿಲ್ ಮಂಡನೆ ಮಾಡಲಾಗಿದೆ. ಇಡೀ ದೇಶದಲ್ಲಿ 543 ಸ್ಥಾನಗಳಲ್ಲಿ ಒಬಿಸಿ ಮೀಸಲಾತಿ ಇಲ್ಲ. ವಿಧಾನ ಸಭೆಗಳಲ್ಲಿಯೂ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲು ಮಹಿಳಾ ಮೀಸಲಾತಿ ದೊರೆಯಲಿ ಆ ಮೇಲೆ ಯಾರಿಗೆ ಎಷ್ಟು ಸ್ಥಾನ ಕೊಡಬೇಕು ಎಂದು ತೀರ್ಮಾನ ಮಾಡಲಿ, ಬದಲಾವಣೆ ನಿರಂತರವಾಗಿ ನಡೆಯುತ್ತದೆ. ಆ ನೆಪದಲ್ಲೇ ಮೂವತ್ತು ವರ್ಷದಿಂದ ಮುಂದೂಡಲಾಗಿದೆ. ಈಗ ಮತ್ತೆ ಮೂವತ್ತು ವರ್ಷ ಮುಂದೂಡುವುದು ಬೇಡ ಎಂದು ಪ್ರಧಾನಮಂತ್ರಿ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಯಾವ ಪ್ರಮಾಣದಲ್ಲಿ ಕ್ಷೇತ್ರಗಳು ಹೆಚ್ಚಳ ಆಗಬೇಕು ಎನ್ನುವುದು ಬಿಲ್ ನಲ್ಲಿ ನಮೂದಿಸಿರುವುದಿಲ್ಲ. ಡಿಲಿಮಿಟೇಷನ್ ಸಮಿತಿ ಅದನ್ನು ನಿರ್ಧರಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande