ರಸ್ತೆಗಳು ದೇಶದ ‘ಅದೃಷ್ಟದ ರೇಖೆಗಳು’ : ಪ್ರಧಾನಿ ಮೋದಿ
ಡೆಹ್ರಾಡೂನ್, 14 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬಹುನಿರೀಕ್ಷಿತ ದೆಹಲಿ–ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಅನ್ನು ಉದ್ಘಾಟಿಸಿ, ದೇಶದ ಅಭಿವೃದ್ಧಿಯಲ್ಲಿ ಮೂಲಸೌಕರ್ಯಗಳ ಪಾತ್ರವನ್ನು ಮಹತ್ವವಾಗಿ ಪ್ರತಿಪಾದಿಸಿದರು. ರಸ್ತೆಗಳು, ರೈಲ್ವೆಗಳು, ವಾಯುಮಾರ್ಗಗಳು ಮತ್ತ
Pm


ಡೆಹ್ರಾಡೂನ್, 14 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬಹುನಿರೀಕ್ಷಿತ ದೆಹಲಿ–ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಅನ್ನು ಉದ್ಘಾಟಿಸಿ, ದೇಶದ ಅಭಿವೃದ್ಧಿಯಲ್ಲಿ ಮೂಲಸೌಕರ್ಯಗಳ ಪಾತ್ರವನ್ನು ಮಹತ್ವವಾಗಿ ಪ್ರತಿಪಾದಿಸಿದರು. ರಸ್ತೆಗಳು, ರೈಲ್ವೆಗಳು, ವಾಯುಮಾರ್ಗಗಳು ಮತ್ತು ಜಲಮಾರ್ಗಗಳನ್ನು ದೇಶದ “ಅದೃಷ್ಟದ ರೇಖೆಗಳು” ಎಂದು ಬಣ್ಣಿಸಿದ ಅವರು, ಇವು ಭವಿಷ್ಯದ ಸಮೃದ್ಧಿಗೆ ಆಧಾರಸ್ತಂಭಗಳಾಗಿವೆ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ಉತ್ತರಾಖಂಡ ತನ್ನ ರಚನೆಯ 25 ವರ್ಷಗಳನ್ನು ಪೂರ್ಣಗೊಳಿಸಿ 26ನೇ ವರ್ಷಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಈ ಯೋಜನೆ ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿದರು. “ಈ ದಶಕ ಉತ್ತರಾಖಂಡದ ದಶಕವಾಗಲಿದೆ” ಎಂಬ ತಮ್ಮ ನಿಲುವನ್ನು ಪುನರುಚ್ಚರಿಸಿದ ಅವರು, ಡಬಲ್ ಎಂಜಿನ್ ಸರ್ಕಾರ ಮತ್ತು ಜನರ ಪರಿಶ್ರಮದಿಂದ ಅಭಿವೃದ್ಧಿ ವೇಗ ಪಡೆಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಮಾರು ₹12,000 ಕೋಟಿ ವೆಚ್ಚದ ಈ ಕಾರಿಡಾರ್ ಉತ್ತರಪ್ರದೇಶದ ಘಜಿಯಾಬಾದ್, ಬಾಗ್ಪತ್, ಶಾಮ್ಲಿ, ಸಹರಾನ್ಪುರ ಮುಂತಾದ ನಗರಗಳ ಮೂಲಕ ಸಾಗುತ್ತಿದ್ದು, ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುತ್ತದೆ. ಪ್ರಯಾಣದ ಅವಧಿ 6 ಗಂಟೆಯಿಂದ ಸುಮಾರು 2.5 ಗಂಟೆಗೆ ಇಳಿಯಲಿದೆ ಎಂದು ಪ್ರಧಾನಿ ಹೇಳಿದರು. ಇದರಿಂದ ಇಂಧನ ಉಳಿತಾಯ, ಸಾರಿಗೆ ವೆಚ್ಚ ಕಡಿತ ಹಾಗೂ ರೈತರ ಉತ್ಪನ್ನಗಳು ವೇಗವಾಗಿ ಮಾರುಕಟ್ಟೆ ತಲುಪಲು ಸಹಕಾರಿಯಾಗಲಿದೆ.

ಪ್ರವಾಸೋದ್ಯಮದ ದೃಷ್ಟಿಯಿಂದ ಈ ಯೋಜನೆ ಮಹತ್ವದ್ದಾಗಿದ್ದು, ಹರಿದ್ವಾರ, ಋಷಿಕೇಶ, ಮಸ್ಸೂರಿ ಹಾಗೂ ಚಾರ್ ಧಾಮ್ ಯಾತ್ರೆಗೆ ಹೊಸ ಚೈತನ್ಯ ನೀಡಲಿದೆ ಎಂದು ಅವರು ಹೇಳಿದರು.

ಮೂಲಸೌಕರ್ಯ ವೆಚ್ಚದ ಕುರಿತು ಮಾತನಾಡಿದ ಪ್ರಧಾನಿ, 2014ರೊಳಗೆ ವಾರ್ಷಿಕ ವೆಚ್ಚ ₹2 ಲಕ್ಷ ಕೋಟಿಗೂ ಕಡಿಮೆ ಇದ್ದರೆ, ಈಗ ಅದು ₹12 ಲಕ್ಷ ಕೋಟಿಗೂ ಮೀರಿದೆ ಎಂದು ತಿಳಿಸಿದರು. ಉತ್ತರಾಖಂಡದಲ್ಲಿಯೇ ₹2.5 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳು ಪ್ರಗತಿಯಲ್ಲಿವೆ ಎಂದರು.

ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿಹೇಳಿದ ಅವರು, ದೇವಭೂಮಿಯ ಪಾವಿತ್ರ್ಯ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಪ್ರವಾಸಿಗರು ಪ್ಲಾಸ್ಟಿಕ್ ಮತ್ತು ಕಸದ ಮೂಲಕ ಪರಿಸರ ಹಾನಿ ಮಾಡಬಾರದು ಎಂದು ಮನವಿ ಮಾಡಿದರು. ಮುಂಬರುವ ಕುಂಭಮೇಳವನ್ನು ಸ್ವಚ್ಛ, ಭವ್ಯವಾಗಿ ನಡೆಸಲು ಸಹಕಾರ ಕೋರಿ ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande