
ನವದೆಹಲಿ, 14 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಇರಾನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ ನಡುವಿನ ಮಾತುಕತೆ ಮುಂದುವರಿಯುವ ನಿರೀಕ್ಷೆ ಮೂಡಿದ ಹಿನ್ನೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮಂಗಳವಾರ ಗಮನಾರ್ಹವಾಗಿ ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ವಹಿವಾಟಿನಲ್ಲಿ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲವು ಆರಂಭಿಕ ವಹಿವಾಟಿನಲ್ಲಿ $2.29 (ಶೇ. 2.31) ಇಳಿಕೆ ಕಂಡು ಪ್ರತಿ ಬ್ಯಾರೆಲ್ಗೆ $96.79 ಮಟ್ಟಕ್ಕೆ ತಲುಪಿದೆ. ಇದೇ ವೇಳೆ ಬ್ರೆಂಟ್ ಕಚ್ಚಾ ತೈಲ ದರವು $1.47 (ಶೇ. 1.48) ಇಳಿಕೆಯಾಗಿದ್ದು, ಬ್ಯಾರೆಲ್ಗೆ $97.48ಕ್ಕೆ ತಗ್ಗಿದೆ.
ಇದಕ್ಕೂ ಮೊದಲು ಸೋಮವಾರ, ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿ ದಿಗ್ಬಂಧನ ಘೋಷಿಸಿದ ಪರಿಣಾಮ ತೈಲ ಬೆಲೆಗಳು ಶೇ. 7ಕ್ಕೂ ಹೆಚ್ಚು ಏರಿಕೆ ಕಂಡು $104 ಮಟ್ಟಕ್ಕೆ ಏರಿಕೆಯಾಗಿದ್ದವು.
ಇದೀಗ, ಇರಾನ್–ಅಮೆರಿಕ ನಡುವಿನ ತಣಿವು ಸಾಧ್ಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಆತಂಕ ಕಡಿಮೆಯಾಗಿದ್ದು, ಬೆಲೆಗಳಲ್ಲಿ ಇಳಿಕೆ ಕಂಡುಬಂದಿದೆ. ಆದರೆ ಎರಡೂ ದೇಶಗಳ ನಡುವೆ ಸಂಪೂರ್ಣ ಸಾಮಾನ್ಯ ಪರಿಸ್ಥಿತಿ ಮರಳುವವರೆಗೆ ತೈಲ ಬೆಲೆಗಳಲ್ಲಿ ಏರಿಳಿತ ಮುಂದುವರಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa