
ಲಕ್ನೋ, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜನಾಥ್ ಸಿಂಗ್ ಅವರು ಖೇಲೋ ಇಂಡಿಯಾ ಯೋಜನೆಯು ಭಾರತದ ಸಾಂಪ್ರದಾಯಿಕ ಕ್ರೀಡೆಗಳ ಪ್ರತಿಷ್ಠೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
ಲಕ್ನೋದ ಕೆ.ಡಿ. ಸಿಂಗ್ ಬಾಬು ಕ್ರೀಡಾಂಗಣದಲ್ಲಿ ನಡೆದ ಎಂಪಿ ಸ್ಪೋರ್ಟ್ಸ್ ಮಹಾಕುಂಭದಲ್ಲಿ ಮಾತನಾಡಿದ ಅವರು, ಕಳೆದ ಹನ್ನೊಂದು ವರ್ಷಗಳಲ್ಲಿ ದೇಶದಲ್ಲಿ ಕ್ರೀಡೆಯ ಹೊಸ ಯುಗ ಆರಂಭವಾಗಿದೆ ಎಂದು ಅಭಿಪ್ರಾಯಪಟ್ಟರು.
ಗಟಕಾ, ಮಲ್ಲಕಂಬ, ಥಾಂಗ್-ಟಾ, ಕಳರಿಪ್ಪಯಟ್ಟು ಹಾಗೂ ಯೋಗಾಸನದಂತಹ ಸಾಂಪ್ರದಾಯಿಕ ಕ್ರೀಡೆಗಳಿಗೆ ಸರ್ಕಾರದಿಂದ ವಿದ್ಯಾರ್ಥಿವೇತನಗಳ ಮೂಲಕ ಉತ್ತೇಜನ ನೀಡಲಾಗುತ್ತಿದೆ. ದೇಶದಾದ್ಯಂತ ಸುಮಾರು 1000 ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಸುಮಾರು ೨೪ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳೂ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಈ ಕೇಂದ್ರಗಳಲ್ಲಿ ತರಬೇತಿ ಹಾಗೂ ಕ್ರೀಡಾ ವಿಜ್ಞಾನ ಆಧಾರಿತ ಬೆಂಬಲ ಒದಗಿಸಲಾಗುತ್ತಿದ್ದು, ಆಟಗಾರರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತಿದೆ. ರಾಜ್ಯ ಮಟ್ಟದಲ್ಲಿಯೂ ಕ್ರೀಡಾ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಈ ದಿಕ್ಕಿನಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದ್ದು, ಮೀರಠದ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯ ಒಂದು ಉದಾಹರಣೆಯಾಗಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆಯನ್ನು ವಿಷಯವಾಗಿ ಪರಿಚಯಿಸಿರುವುದು ಕ್ರೀಡಾ ವಲಯಕ್ಕೆ ಉತ್ತೇಜನ ನೀಡಿದೆ. ದೇಶದ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯೂ ಈ ಪ್ರಗತಿಗೆ ಮತ್ತಷ್ಟು ಬಲ ನೀಡಲಿದೆ ಎಂದು ಅವರು ಹೇಳಿದರು.
ಖೇಲೋ ಇಂಡಿಯಾ ಯೋಜನೆಯಿಂದ ಮಹಿಳಾ ಕ್ರೀಡಾಪಟುಗಳ ಭಾಗವಹಿಸುವಿಕೆಯೂ ಗಣನೀಯವಾಗಿ ಹೆಚ್ಚಾಗಿದೆ. ವಿವಿಧ ನಗರಗಳಲ್ಲಿ ಮಹಿಳಾ ಲೀಗ್ಗಳನ್ನು ಆಯೋಜಿಸಲಾಗುತ್ತಿದ್ದು, ಹೆಣ್ಣುಮಕ್ಕಳಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ ಎಂದು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಯುವ ಆಟಗಾರರ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಹಳ್ಳಿಗಳ ಸಮೀಪವೂ ಆಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ದೇಶದ ದೂರದ ಪ್ರದೇಶಗಳಲ್ಲಿಯೂ ಕ್ರೀಡಾ ಸೌಲಭ್ಯಗಳು ಲಭ್ಯವಾಗುತ್ತಿವೆ.
ಸುಮಾರು 5000 ಕೋಟಿ ರೂಪಾಯಿಗಳನ್ನು ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ ಎಂದು ತಿಳಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಕ್ರೀಡಾ ವಾತಾವರಣದಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದ್ದು, ವಿಶ್ವ ಮಟ್ಟದಲ್ಲಿ ದೇಶ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿದೆ. ಕ್ರೀಡೆಯ ಮೂಲಕ ಸಮಾಜದ ಸಬಲೀಕರಣ ಸಾಧ್ಯವಾಗುತ್ತಿದ್ದು, ಇದು ಭವಿಷ್ಯದಲ್ಲಿ ಭಾರತವನ್ನು ಪ್ರಮುಖ ಕ್ರೀಡಾ ಶಕ್ತಿಯನ್ನಾಗಿ ರೂಪಿಸುವಲ್ಲಿ ನೆರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa