
ಕಾಂಕೇರ್, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಛತ್ತೀಸ್‌ಗಢದ ಕಾಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ನಡೆದ ಎನ್ಕೌಂಟರ್ನಲ್ಲಿ ₹5 ಲಕ್ಷ ಬಹುಮಾನ ಘೋಷಿಸಲಾಗಿದ್ದ ಮಹಿಳಾ ನಕ್ಸಲ್ ಹತ್ಯೆಯಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ನಕ್ಸಲ್ ಪ್ರಭಾವಿತ ಛೋಟೆ ಬೇಥಿಯಾ ಅರಣ್ಯ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆಗಳ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ವಿಶೇಷ ದಳವು ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಅರಣ್ಯದಲ್ಲಿ ಸುತ್ತುವರಿಯುತ್ತಿದ್ದ ಭದ್ರತಾ ಪಡೆಗಳ ಮೇಲೆ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪಡೆಗಳು ಕೂಡ ತಿರುಗೇಟು ನೀಡಿದಾಗ ಎನ್ಕೌಂಟರ್ ನಡೆಯಿತು.
ಈ ಗುಂಡಿನ ಚಕಮಕಿಯಲ್ಲಿ ‘ರೂಪಿ’ ಎಂಬ ಹೆಸರಿನಿಂದ ಗುರುತಿಸಲ್ಪಟ್ಟ ಮಹಿಳಾ ನಕ್ಸಲ್ ಹತರಾಗಿದ್ದಾಳೆ. ಆಕೆಯ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸ್ಥಳದಿಂದ ಒಂದು ರಿವಾಲ್ವರ್ ಸಹ ಜಪ್ತಿ ಮಾಡಲಾಗಿದೆ.
ಎನ್ಕೌಂಟರ್ನ್ನು ದೃಢೀಕರಿಸಿದ ನಿಖಿಲ್ ರಾಖೆಚಾ ಅವರು, ನಕ್ಸಲರನ್ನು ಶರಣಾಗಲು ಹಲವು ಬಾರಿ ಅವಕಾಶ ನೀಡಲಾಗಿತ್ತು ಎಂದು ತಿಳಿಸಿದ್ದಾರೆ. ಘಟನೆ ಬಳಿಕ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಇತರ ನಕ್ಸಲರಿಗಾಗಿ ಶೋಧ ಮುಂದುವರಿದಿದೆ ಎಂದು ಹೇಳಿದರು.
ಪೊಲೀಸ್ ಮೂಲಗಳ ಪ್ರಕಾರ, ಮೃತಳು ರತಪುರ ಪ್ರದೇಶ ಸಮಿತಿಯ ಸಕ್ರಿಯ ಸದಸ್ಯೆಯಾಗಿದ್ದ ರೂಪಿ ರೆಡ್ಡಿ , ದೀರ್ಘ ಕಾಲದಿಂದ ಭದ್ರತಾ ಪಡೆಗಳ ಗಮನದಲ್ಲಿದ್ದರು. ಬಸ್ತರ್ ಪ್ರದೇಶದಲ್ಲಿ ಪ್ರಮುಖ ಕೇಡರ್ಗಳಲ್ಲಿ ಒಬ್ಬಳಾಗಿ ಪರಿಗಣಿಸಲ್ಪಟ್ಟಿದ್ದಾಳೆ.
ಇನ್ನೂ, ಆಕೆ ವಿಜಯ್ ರೆಡ್ಡಿ ಅವರ ಪತ್ನಿಯಾಗಿದ್ದು, ವಿಜಯ್ ರೆಡ್ಡಿ ಇತ್ತೀಚೆಗೆ ನಡೆದ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದರು. ನಕ್ಸಲರನ್ನು ಶರಣಾಗುವುದನ್ನು ತಡೆಯುವಲ್ಲಿ ರೂಪಿ ಪ್ರಮುಖ ಪಾತ್ರ ವಹಿಸಿದ್ದಾಳೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಗಮನಾರ್ಹವಾಗಿ, ಛತ್ತೀಸ್‌ಗಢವನ್ನು ಮಾವೋವಾದಿಗಳಿಂದ ಮುಕ್ತ ರಾಜ್ಯವೆಂದು ಸರ್ಕಾರ ಘೋಷಿಸಿದ ಕೇವಲ 12 ದಿನಗಳಲ್ಲೇ ಈ ಘಟನೆ ನಡೆದಿದೆ. ನಕ್ಸಲರಿಗೆ ಶರಣಾಗಲು ಸರ್ಕಾರ ನೀಡಿದ್ದ ವಿಶೇಷ ಅವಕಾಶವನ್ನು ಹಲವರು, ವಿಶೇಷವಾಗಿ ರೂಪಿ, ನಿರ್ಲಕ್ಷಿಸಿದ್ದರಿಂದ ಇಂತಹ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕ್ಸಲ ಚಟುವಟಿಕೆಗಳ ವಿರುದ್ಧ ಭದ್ರತಾ ಪಡೆಗಳ ಕಾರ್ಯಾಚರಣೆ ಮುಂದುವರಿಯಲಿದ್ದು, ಹಿಂಸಾಚಾರದ ಹಾದಿಯನ್ನು ತ್ಯಜಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa