ಬಿಹಾರದಲ್ಲಿ ತೀವ್ರ ರಾಜಕೀಯ ಚಟುವಟಿಕೆ
ವಿದ್ಯಮಾನ
ಬಿಹಾರ ಲೋಕಭವನ


ಪಾಟ್ನಾ, 13 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಿಹಾರದಲ್ಲಿ ರಾಜಕೀಯ ವಿದ್ಯಮಾನಗಳು ತೀವ್ರಗೊಂಡಿದ್ದು, ಮುಂದಿನ 48 ಗಂಟೆಗಳು ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವಂತಿವೆ. ಹೊಸ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಸಿದ್ಧತೆಗಳು ವೇಗ ಪಡೆದಿವೆ.

ರಾಜ್ಯಪಾಲರು ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ತ್ಯಾಗರಾಜನ್ ಎಸ್.ಎಂ. ಅವರನ್ನು ಲೋಕಭವನಕ್ಕೆ ಕರೆಯಿಸಿ, ಪ್ರಮಾಣ ವಚನ ಸಮಾರಂಭದ ಸಿದ್ಧತೆಗಳನ್ನು ಅಂತಿಮಗೊಳಿಸುವಂತೆ ಸೂಚಿಸಿರುವುದು ಬೆಳವಣಿಗೆಗೆ ಮತ್ತಷ್ಟು ತೂಕ ನೀಡಿದೆ.

ಏಪ್ರಿಲ್ 14ರಂದು ನಡೆಯಲಿರುವ ಸಚಿವ ಸಂಪುಟ ಸಭೆಯನ್ನು ನಿರ್ಣಾಯಕ ಹೆಜ್ಜೆ ಎಂದು ಪರಿಗಣಿಸಲಾಗುತ್ತಿದೆ. ಇದೇ ವೇಳೆ, ಮುಖ್ಯಮಂತ್ರಿಗಳ ನಿವಾಸ 1 ಅಣ್ಣಾ ಮಾರ್ಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಂಜಯ್ ಝಾ, ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) ಹಾಗೂ ವಿಜಯ್ ಕುಮಾರ್ ಚೌಧರಿ ಸೇರಿದಂತೆ ಜೆಡಿಯು ಹಿರಿಯ ನಾಯಕರು ಸಭೆಗಳಲ್ಲಿ ನಿರತರಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಯು ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಝಾ, ಪೂರ್ವನಿಗದಿತ ಯೋಜನೆಯಂತೆ ಎಲ್ಲ ಪ್ರಕ್ರಿಯೆಗಳು ಸುಗಮವಾಗಿ ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಸ್ವತಃ ಪರಿಸ್ಥಿತಿಯನ್ನು ನಿಗಾ ವಹಿಸುತ್ತಿದ್ದಾರೆ ಎಂದೂ ಅವರು ಹೇಳಿದರು.

ಇನ್ನೊಂದೆಡೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಕೂಡ ತನ್ನ ಮುಂದಿನ ನಡೆಗಳನ್ನು ರೂಪಿಸುತ್ತಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರು ಏಪ್ರಿಲ್ 14ರಂದು ಪಾಟ್ನಾಕ್ಕೆ ಆಗಮಿಸಲಿದ್ದು, ಕೇಂದ್ರ ವೀಕ್ಷಕರಾಗಿ ನೇಮಕಗೊಂಡಿದ್ದಾರೆ.

ಹೊಸ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆ ಕುರಿತು ವದಂತಿಗಳು ಹರಿದಾಡುತ್ತಿದ್ದರೂ, ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande