


ಗದಗ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಹುಯಿಲಗೋಳ ಗ್ರಾಮದ ಯುವಕ ಚಂದ್ರು ಕುರಿ ಕೊಲೆ ಪ್ರಕರಣವನ್ನು ಗದಗ ಗ್ರಾಮೀಣ ಪೊಲೀಸರು ಕೇವಲ 48 ಗಂಟೆಗಳಲ್ಲಿ ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನೈತಿಕ ಸಂಬಂಧವೇ ಈ ಭೀಕರ ಹತ್ಯೆಗೆ ಮೂಲ ಕಾರಣ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.
ಮಾರ್ಚ್ 25ರ ಮಧ್ಯರಾತ್ರಿ ಮನೆಯಿಂದ ಯಾರಿಗೂ ತಿಳಿಯದಂತೆ ಹೊರಟಿದ್ದ ಚಂದ್ರು ಕುರಿ ನಾಪತ್ತೆಯಾಗಿದ್ದ. ಕುಟುಂಬಸ್ಥರು ಹಾಗೂ ಸಂಬಂಧಿಕರು ಹಲವು ಕಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗಲಿಲ್ಲ.
ಇದೇ ವೇಳೆ ಮಾರ್ಚ್ 28ರಂದು ಹುಯಿಲಗೋಳ-ಹೊಂಬಳ ರಸ್ತೆಯ ಆಲಿಹಳ್ಳದ ಬಳಿ ಬ್ರಿಡ್ಜ್ ಕೆಳಗೆ ಸುಟ್ಟುಹೋದ ಸ್ಥಿತಿಯಲ್ಲಿ ಅನಾಮಧೇಯ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಗದಗ ಜಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದರು.
ಶವದ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ, ನಾಪತ್ತೆಯಾಗಿದ್ದ ಚಂದ್ರು ಕುರಿಯೇ ಆ ಶವ ಎಂದು ಕುಟುಂಬಸ್ಥರು ಗುರುತಿಸಿದರು.
ಪ್ರಾರಂಭದಲ್ಲಿ ಕುಟುಂಬಸ್ಥರು ತಮ್ಮ ಮನೆಯ ಎದುರಿನವರ ಮೇಲೆ ಶಂಕೆ ವ್ಯಕ್ತಪಡಿಸಿದ್ದರಿಂದ ಪೊಲೀಸರು ಆ ದಿಕ್ಕಿನಲ್ಲಿ ತನಿಖೆ ಆರಂಭಿಸಿದರು. ಆದರೆ ಮುಂದುವರಿದ ತನಿಖೆಯಲ್ಲಿ ಪ್ರಕರಣಕ್ಕೆ ಬೇರೆ ತಿರುವು ಸಿಕ್ಕಿತು.
ಪೊಲೀಸರು ಚಂದ್ರು ಕುರಿಯ ವೈಯಕ್ತಿಕ ಜೀವನದ ಬಗ್ಗೆ ಪರಿಶೀಲನೆ ನಡೆಸಿದಾಗ, ಆತ ಹಲವು ಮಹಿಳೆಯರೊಂದಿಗೆ ಸಂಪರ್ಕದಲ್ಲಿದ್ದ ಮಾಹಿತಿ ಲಭ್ಯವಾಯಿತು. ಇದರಲ್ಲಿ ಅದೇ ಗ್ರಾಮದ ರತ್ನಾ ಕುದರಿ ಎಂಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಸಂಗತಿ ಬಹಿರಂಗವಾಯಿತು. ಇದೇ ವೇಳೆ ರತ್ನಾ ಹಾಗೂ ಅವಳ ಸಹೋದರ ಮಹಾಂತೇಶ ಗ್ರಾಮದಿಂದ ನಾಪತ್ತೆಯಾಗಿರುವುದು ಪೊಲೀಸರ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿತು.
ಪೊಲೀಸರು ಶಿರಹಟ್ಟಿ ತಾಲೂಕಿನ ಹೊಳಲಾಪುರ ಗ್ರಾಮದಲ್ಲಿರುವ ರತ್ನಾಳ ವೈವಾಹಿಕ ಮನೆಗೆ ತೆರಳಿ ವಿಚಾರಣೆ ನಡೆಸಿದರು.
ತನಿಖೆ ವೇಳೆ ಆರೋಪಿಗಳು ಧಾರವಾಡ ಜಿಲ್ಲೆಯ ಸಂಬಂಧಿಕರ ಮನೆಯಲ್ಲಿ ಅಡಗಿರುವುದು ತಿಳಿದು ಬಂದಿತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ರತ್ನಾ ಕುದರಿ, ಅವಳ ಗಂಡ ಈರಪ್ಪ ಕುದರಿ ಹಾಗೂ ಸಹೋದರ ಮಹಾಂತೇಶರನ್ನು ಬಂಧಿಸಿದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.
ತನಿಖೆಯಿಂದ ಹೊರಬಂದ ವಿವರಗಳ ಪ್ರಕಾರ, ರತ್ನಾ ಕುದರಿ ಮದುವೆಯಾದ ನಂತರವೂ ಗಂಡನ ಜೊತೆ ಸರಿಯಾಗಿ ಸಂಸಾರ ನಡೆಸದೆ ತನ್ನ ತವರು ಊರಾದ ಹುಯಿಲಗೋಳಕ್ಕೆ ಆಗಾಗ ಬರುತ್ತಿದ್ದಳು. ಈ ವೇಳೆ ಚಂದ್ರು ಕುರಿಯೊಂದಿಗೆ ಆಕೆಗೆ ಅನೈತಿಕ ಸಂಬಂಧ ಬೆಳೆದಿತ್ತು. ಈ ವಿಷಯ ರತ್ನಾಳ ಗಂಡ ಈರಪ್ಪ ಹಾಗೂ ಸಹೋದರ ಮಹಾಂತೇಶಗೆ ತಿಳಿದಾಗ, ಇಬ್ಬರೂ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು. ಆದರೂ ಅವರ ಸಂಪರ್ಕ ಮುಂದುವರಿದಿದ್ದರಿಂದ ಕೊಲೆ ಮಾಡಲು ಸಂಚು ರೂಪಿಸಿದ್ದರು.
ಯೋಜನೆಯಂತೆ ರತ್ನಾಳ ಮೂಲಕ ಚಂದ್ರುವಿಗೆ ಕರೆ ಮಾಡಿ, ರಾತ್ರಿ 12 ಗಂಟೆಗೆ ಮನೆಗೆ ಬರುವಂತೆ ಹೇಳಲಾಗಿದೆ. ಚಂದ್ರು ಮನೆಗೆ ಬಂದ ಬಳಿಕ ಮನೆಯ ಸಮೀಪದ ಶೌಚಾಲಯದ ಬಳಿ ಅಡಗಿ ಕುಳಿತಿದ್ದ ಈರಪ್ಪ ಹಾಗೂ ಮಹಾಂತೇಶರು ಆತನ ಮೇಲೆ ದಾಳಿ ನಡೆಸಿದ್ದಾರೆ. ಬಳಿಕ ‘ಮಾತನಾಡೋದು ಇದೆ’ ಎಂದು ನೆಪ ಹೇಳಿ ಬ್ರಿಡ್ಜ್ ಬಳಿ ಕರೆದೊಯ್ದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕತ್ತು ಕತ್ತರಿಸಿ ಕೊಲೆಗೈದಿದ್ದಾರೆ.
ಕೊಲೆ ಮಾಡಿದ ನಂತರ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು ಮೂವರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ನೊಂದೆಡೆ, ಚಂದ್ರು ಕುರಿಯ ಕುಟುಂಬಸ್ಥರು ಭೀಕರಲಿಂಗೇಶ್ವರ ಜಾತ್ರೆಯಲ್ಲಿ ಮಗನ ಮದುವೆ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಆದರೆ ಅನೈತಿಕ ಸಂಬಂಧದ ಬೆನ್ನಲ್ಲೇ ನಡೆದ ಈ ಭೀಕರ ಹತ್ಯೆ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಒಟ್ಟಿನಲ್ಲಿ, ಇಡೀ ಗದಗ ಜಿಲ್ಲೆಯನ್ನು ನಡುಗಿಸಿದ್ದ ಈ ಪ್ರಕರಣವನ್ನು ಕೇವಲ 48 ಗಂಟೆಗಳಲ್ಲಿ ಭೇದಿಸಿ ಆರೋಪಿಗಳನ್ನು ಬಂಧಿಸಿದ ಗದಗ ಗ್ರಾಮೀಣ ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / lalita MP