

ದಿಬ್ರುಗಢ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬೆಳಿಗ್ಗೆ ಅಸ್ಸಾಂನ ದಿಬ್ರುಗಢದಲ್ಲಿರುವ ಚಹಾ ತೋಟಕ್ಕೆ ಭೇಟಿ ನೀಡಿ ಚಹಾ ಎಲೆಗಳನ್ನು ಕಿತ್ತು, ರಾಜ್ಯದ ಚಹಾ ಉದ್ಯಮದ ಮಹತ್ವವನ್ನು ಒತ್ತಿ ಹೇಳಿದರು.
ಭೇಟಿಯ ವೇಳೆ ಪ್ರಧಾನ ಮಂತ್ರಿಯವರು ಮಹಿಳೆಯರು ಸೇರಿದಂತೆ ಚಹಾ ತೋಟದ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಅವರ ಪರಿಶ್ರಮ ಮತ್ತು ಕೊಡುಗೆಗಳನ್ನು ಶ್ಲಾಘಿಸಿದರು.
ಕಾರ್ಮಿಕರ ಜೀವನಮಟ್ಟ ಸುಧಾರಣೆ ಮತ್ತು ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂಬುದನ್ನು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.
ಕಾರ್ಮಿಕರ ಮಕ್ಕಳ ಶಿಕ್ಷಣ, ವೇತನ ಹಾಗೂ ಅವರಿಗೆ ಆಯುಷ್ಮಾನ್ ಕಾರ್ಡ್ ಸೌಲಭ್ಯ ಲಭ್ಯವಿದೆಯೇ ಎಂಬುದರ ಬಗ್ಗೆ ಪ್ರಧಾನ ಮಂತ್ರಿಯವರು ವಿಚಾರಿಸಿದರು. ಈ ಸಂವಾದವು ಕಾರ್ಮಿಕರ ಕಲ್ಯಾಣದ ಕಡೆ ಸರ್ಕಾರದ ಗಮನವನ್ನು ಪ್ರತಿಬಿಂಬಿಸಿತು.
ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಮಂಗಳವಾರ ರಾತ್ರಿ ದಿಬ್ರುಗಢ ತಲುಪಿದರು. ರಾತ್ರಿ ಸುಮಾರು 8:40ಕ್ಕೆ ಮೋಹನ್ಬರಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ, ಬೃಹತ್ ಬೆಂಗಾವಲು ಪಡೆಯೊಂದಿಗೆ ಮನೋಹರಿ ರೆಸಾರ್ಟ್ಗೆ ತೆರಳಿ ಅಲ್ಲೇ ರಾತ್ರಿ ವಾಸ್ತವ್ಯ ಹೂಡಿದರು.
ಮುಂದಿನ ಕಾರ್ಯಕ್ರಮಗಳ ಭಾಗವಾಗಿ ಪ್ರಧಾನಿ ಮೋದಿ ಧೇಮಾಜಿ ಮತ್ತು ಲಖಿಂಪುರ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa