ಸಿದ್ಧಗಂಗಾ ಮಠದ ಸೇವೆ ದೇಶದ ವಿಕಾಸಕ್ಕೆ ಪ್ರೇರಣೆ : ದ್ರೌಪದಿ ಮುರ್ಮು
ತುಮಕೂರು, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ಸಿದ್ಧಗಂಗಾ ಮಠವು ದೇಶದ ಸಮಗ್ರ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದು, ಬಡ ಮತ್ತು ಅನಾಥ ಮಕ್ಕಳಿಗೆ ಶಿಕ್ಷಣ ಹಾಗೂ ಆಶ್ರಯ ನೀಡುವ ಮೂಲಕ ಮಾನವೀಯ ಮೌಲ್ಯಗಳನ್ನು ಬಿತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. ತುಮಕೂರಿನ ಸಿದ್ಧಗಂಗಾ ಮಠದ
President


President speech


ತುಮಕೂರು, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಸಿದ್ಧಗಂಗಾ ಮಠವು ದೇಶದ ಸಮಗ್ರ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದು, ಬಡ ಮತ್ತು ಅನಾಥ ಮಕ್ಕಳಿಗೆ ಶಿಕ್ಷಣ ಹಾಗೂ ಆಶ್ರಯ ನೀಡುವ ಮೂಲಕ ಮಾನವೀಯ ಮೌಲ್ಯಗಳನ್ನು ಬಿತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ತುಮಕೂರಿನ ಸಿದ್ಧಗಂಗಾ ಮಠದ ವಸ್ತು ಪ್ರದರ್ಶನಾಲಯ ಮೈದಾನದಲ್ಲಿ ನಡೆದ ಶ್ರೀ ಶ್ರೀ ಶಿವಕುಮಾರ್ ಸ್ವಾಮೀಜಿಗಳ 119ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಠದ ಸೇವಾ ಪರಂಪರೆ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದರು. “ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿರುವುದು ನನಗೆ ಅಪಾರ ಸಂತೋಷ ತಂದಿದೆ. ದಾಸೋಹ ಮತ್ತು ಶಿಕ್ಷಣದ ಮೂಲಕ ಮಠ ಬಡ ಮಕ್ಕಳ ಬದುಕಿಗೆ ಬೆಳಕು ತಂದಿದೆ. ‘ದಯವೇ ಧರ್ಮದ ಮೂಲ’ ಎಂಬ ತತ್ವವನ್ನು ಮಠ ನೈಜವಾಗಿ ಅನುಷ್ಠಾನಗೊಳಿಸುತ್ತಿದೆ,” ಎಂದು ಹೇಳಿದರು.

ವೀರಶೈವ-ಲಿಂಗಾಯತ ಮಠಗಳಲ್ಲಿ ಸಿದ್ಧಗಂಗಾ ಮಠವು ವಿಶಿಷ್ಟ ಸ್ಥಾನ ಹೊಂದಿದ್ದು, ನಿರಂತರ ಸೇವಾ ಚಟುವಟಿಕೆಗಳಿಂದ ಮುಂಚೂಣಿಯಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ವೇಳೆ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿಗಳ ಜೀವನವೇ ತ್ಯಾಗ ಮತ್ತು ಸೇವೆಯ ಪ್ರತಿರೂಪವಾಗಿತ್ತು. “ಬಡ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸುವುದು ಅವರ ಜೀವನದ ಮುಖ್ಯ ಗುರಿಯಾಗಿತ್ತು. ಅವರ ಸಾಧನೆ ಪವಾಡದಂತದ್ದು,” ಎಂದು ಹೇಳಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಾತನಾಡಿ, “ಮಾನವ ಕಲ್ಯಾಣಕ್ಕಾಗಿ ಜೀವನವನ್ನೇ ಸಮರ್ಪಿಸಿದ ಶಿವಕುಮಾರ ಶ್ರೀಗಳ ಸೇವೆ ಅಪಾರ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ತತ್ವವನ್ನು ಅವರು ಜೀವನದಲ್ಲಿ ಅಳವಡಿಸಿಕೊಂಡಿದ್ದರು,” ಎಂದು ಶ್ಲಾಘಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಶಿವಕುಮಾರ ಸ್ವಾಮೀಜಿಗಳು ಅನಾಥ ಮಕ್ಕಳಿಗೆ ತಂದೆಯಂತಿದ್ದು, ಮಾನವೀಯತೆಯ ಪ್ರತೀಕವಾಗಿದ್ದರು, “ಅವರು ಮಾನವದಿಂದ ಮಹದೇವರಾದವರು,” ಎಂದು ಹೇಳಿದರು.

ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ ಅವರು, ಸಿದ್ಧಗಂಗಾ ಮಠವು ಕೇವಲ ಧಾರ್ಮಿಕ ಕ್ಷೇತ್ರವಲ್ಲ, ಬದಲಾಗಿ ಶಿಕ್ಷಣ ಮತ್ತು ಸಾಮಾಜಿಕ ಕ್ರಾಂತಿಯ ಕೇಂದ್ರವಾಗಿದೆ ಎಂದು ಹೇಳಿದರು. ತ್ರಿವಿಧ ದಾಸೋಹದ ಮೂಲಕ ಮಠ ವಿಶ್ವವಿಖ್ಯಾತಿ ಪಡೆದಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ರಾಷ್ಟ್ರಪತಿಗಳಿಗೆ ಬಸವಣ್ಣನ ಮೂರ್ತಿಯನ್ನು ಮಠದ ಪರವಾಗಿ ಗೌರವಪೂರ್ವಕವಾಗಿ ಉಡುಗೊರೆಯಾಗಿ ನೀಡಲಾಯಿತು. ವಿವಿಧ ಕೇಂದ್ರ ಮತ್ತು ರಾಜ್ಯ ಸಚಿವರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande