ಜೆಟ್ ಇಂಧನ ಬೆಲೆ ಏರಿಕೆ ; ವಿಮಾನ ಪ್ರಯಾಣ ಮತ್ತಷ್ಟು ದುಬಾರಿ ಸಾಧ್ಯತೆ
ನವದೆಹಲಿ, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : 2026-27ರ ಹೊಸ ಹಣಕಾಸು ವರ್ಷದ ಮೊದಲ ದಿನವೇ ದೇಶದಲ್ಲಿ ವಿಮಾನ ಪ್ರಯಾಣಿಕರಿಗೆ ಆಘಾತ ಎದುರಾಗಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ವಾಯುಯಾನ ಟರ್ಬೈನ್ ಇಂಧನ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಜೆಟ್ ಇಂಧನದ ಬೆಲೆ ಮೊದಲ ಬಾರಿಗೆ ಪ್ರತ
ಸಾಂಕೇತಿಕ ಚಿತ್ರ


ನವದೆಹಲಿ, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : 2026-27ರ ಹೊಸ ಹಣಕಾಸು ವರ್ಷದ ಮೊದಲ ದಿನವೇ ದೇಶದಲ್ಲಿ ವಿಮಾನ ಪ್ರಯಾಣಿಕರಿಗೆ ಆಘಾತ ಎದುರಾಗಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ವಾಯುಯಾನ ಟರ್ಬೈನ್ ಇಂಧನ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಜೆಟ್ ಇಂಧನದ ಬೆಲೆ ಮೊದಲ ಬಾರಿಗೆ ಪ್ರತಿ ಕಿಲೋಲೀಟರ್ಗೆ ₹2 ಲಕ್ಷದ ಗಡಿ ದಾಟಿದೆ.

ಪಶ್ಚಿಮ ಏಷ್ಯಾದ ಬಿಕ್ಕಟ್ಟು ಹಾಗೂ ಜಾಗತಿಕ ಇಂಧನ ಸರಬರಾಜಿನ ಅಸ್ಥಿರತೆ ಇದರ ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಮಾರ್ಗದ ವ್ಯತ್ಯಯದಿಂದ ಕಚ್ಚಾ ತೈಲ ಸಾಗಣೆ ಮೇಲೆ ಗಂಭೀರ ಪರಿಣಾಮ ಬಿದ್ದಿದೆ.

ಅಧಿಕೃತ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಎಟಿಎಫ್ ಬೆಲೆ ಪ್ರತಿ ಕಿಲೋಲೀಟರ್ಗೆ ₹1,10,703.08 ಅಥವಾ ಶೇಕಡಾ 114.5 ರಷ್ಟು ಏರಿಕೆಯಾಗಿ ₹2,07,341.22 ಕ್ಕೆ ತಲುಪಿದೆ. ಇದು ಸತತ ಎರಡನೇ ತಿಂಗಳ ಏರಿಕೆಯಾಗಿದ್ದು, ವಿಮಾನಯಾನ ಕಂಪನಿಗಳ ಕಾರ್ಯಾಚರಣೆ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ.

ಇದಕ್ಕೂ ಮೊದಲು ಮಾರ್ಚ್ 1 ರಂದು ಎಟಿಎಫ್ ದರದಲ್ಲಿ ₹5,244.75 (5.70%) ಏರಿಕೆ ಮಾಡಲಾಗಿತ್ತು. 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ನಂತರ ಜಾಗತಿಕ ತೈಲ ಬೆಲೆ ಏರಿಕೆಯಿಂದ ಎಟಿಎಫ್ ದರ ₹1.10 ಲಕ್ಷದ ಮಟ್ಟ ತಲುಪಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಸ್ತುತ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆಯನ್ನು ಉಂಟುಮಾಡಿದೆ. ಇದರಿಂದ ಕಚ್ಚಾ ತೈಲ ಬೆಲೆ ಗಗನಕ್ಕೇರಿದ್ದು, ಅದರ ನೇರ ಪರಿಣಾಮವಾಗಿ ಎಟಿಎಫ್ ದರಗಳು ಏರಿಕೆ ಕಂಡಿವೆ.

ಈ ಹಿನ್ನೆಲೆಯಲ್ಲಿ, ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರಯಾಣ ದರಗಳು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದ್ದು, ಪ್ರಯಾಣಿಕರ ಮೇಲೆ ಹೆಚ್ಚುವರಿ ಆರ್ಥಿಕ ಭಾರ ಬೀಳುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande