ಗಲ್ಫ್ ದೇಶಗಳಿಗೆ ಏರ್ ಇಂಡಿಯಾ, ಇಂಡಿಗೋ ವಿಮಾನ ಸೇವೆ ಮುಂದುವರಿಕೆ
ನವದೆಹಲಿ, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಏರ್ ಇಂಡಿಯಾ ಹಾಗೂ ಇಂಡಿಗೋ ವಿಮಾನಯಾನ ಸಂಸ್ಥೆಗಳು ದುಬೈ, ಅಬುಧಾಬಿ ಸೇರಿದಂತೆ ಗಲ್ಫ್ ದೇಶಗಳಿಗೆ ನಿಗದಿತ ವಿಮಾನ ಸೇವೆಗಳನ್ನು ಮುಂದುವರಿಸುತ್ತಿವೆ. ಏರ್ ಇಂಡಿಯಾ ಗ್ರೂಪ್ ಪ್ರಕಟಿ
Flights photo


ನವದೆಹಲಿ, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಏರ್ ಇಂಡಿಯಾ ಹಾಗೂ ಇಂಡಿಗೋ ವಿಮಾನಯಾನ ಸಂಸ್ಥೆಗಳು ದುಬೈ, ಅಬುಧಾಬಿ ಸೇರಿದಂತೆ ಗಲ್ಫ್ ದೇಶಗಳಿಗೆ ನಿಗದಿತ ವಿಮಾನ ಸೇವೆಗಳನ್ನು ಮುಂದುವರಿಸುತ್ತಿವೆ.

ಏರ್ ಇಂಡಿಯಾ ಗ್ರೂಪ್ ಪ್ರಕಟಿಸಿದ ಮಾಹಿತಿಯಂತೆ, ಏಪ್ರಿಲ್ 1ರಂದು ಯುಎಇ ಸೇರಿದಂತೆ ಪಶ್ಚಿಮ ಏಷ್ಯಾ ಪ್ರದೇಶಕ್ಕೆ ಮತ್ತು ಅಲ್ಲಿಂದ ಒಟ್ಟು 30 ವಿಮಾನಗಳು ಸಂಚರಿಸಲಿವೆ. ಇದರಲ್ಲಿ 16 ವಿಮಾನಗಳು ಯುಎಇಗೆ ಹಾರಾಟ ನಡೆಸಲಿವೆ. ಏರ್ ಇಂಡಿಯಾ ಹಾಗೂ ಅದರ ಅಂಗ ಸಂಸ್ಥೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಮೂಲಕ ಈ ಸೇವೆಗಳು ಒದಗಿಸಲಾಗುತ್ತಿದೆ.

ಇದನ್ನೇ ಅನುಸರಿಸಿ, ಇಂಡಿಗೋ ಕೂಡ ಪಶ್ಚಿಮ ಏಷ್ಯಾ ಪ್ರದೇಶಕ್ಕೆ ತನ್ನ 30 ವಿಮಾನಗಳು ನಿಗದಿಯಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ. ದುಬೈ, ಅಬುಧಾಬಿ, ರಿಯಾದ್, ಕುವೈತ್, ಬಹ್ರೇನ್, ಮಸ್ಕತ್ ಹಾಗೂ ದೋಹಾ ನಗರಗಳಿಗೆ ವಿಮಾನ ಸಂಚಾರ ಮುಂದುವರಿಯಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಆದರೆ, ಬಿಕ್ಕಟ್ಟಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ವಿಮಾನದ ಇತ್ತೀಚಿನ ಸ್ಥಿತಿಯನ್ನು ವೆಬ್ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಪರಿಶೀಲಿಸಬೇಕು ಎಂದು ಇಂಡಿಗೋ ಮನವಿ ಮಾಡಿದೆ. ಪರಿಸ್ಥಿತಿಗೆ ಅನುಗುಣವಾಗಿ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯತೆ ಇರುವುದರಿಂದ ಈ ಎಚ್ಚರಿಕೆ ನೀಡಲಾಗಿದೆ.

ಇದೇ ವೇಳೆ, ದೆಹಲಿಯಲ್ಲಿ ಮಳೆ ಮತ್ತು ಬಿರುಗಾಳಿಯಿಂದ ವಿಮಾನ ಸೇವೆಗಳು ವಿಳಂಬವಾಗಿರುವುದಾಗಿ ಇಂಡಿಗೋ ತಿಳಿಸಿದೆ. ರಸ್ತೆ ಸಂಚಾರವೂ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ ಪ್ರಯಾಣಿಕರು ಹೆಚ್ಚುವರಿ ಸಮಯವನ್ನು ಮೀಸಲಿಡಬೇಕು ಎಂದು ಸಲಹೆ ನೀಡಲಾಗಿದೆ.

ಪ್ರಯಾಣಿಕರ ನೋಂದಾಯಿತ ಸಂಪರ್ಕ ವಿವರಗಳಿಗೆ ಅಗತ್ಯ ಮಾಹಿತಿಗಳನ್ನು ಕಳುಹಿಸಲಾಗುತ್ತಿದ್ದು, ಸಹಾಯಕ್ಕಾಗಿ ಬೆಂಬಲ ತಂಡಗಳು ಸಿದ್ಧವಾಗಿವೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande