
ಹಾವೇರಿ, 07 ಮಾರ್ಚ್ (ಹಿ.ಸ.):
ಆ್ಯಂಕರ್:ಧರ್ಮ ಮತ್ತು ಕಾಯಕ ಒಂದೇ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಶ್ರೀ ವಿರಕ್ತಮಠದಲ್ಲಿ ನಡೆದ 33ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ಲಿಂಗೈಕ್ಯ ಶ್ರೀ ಸಂಗನಬಸವ ಮಹಾಸ್ವಾಮಿಗಳ ಹಾಗೂ ಶ್ರೀ ಬಸವಲಿಂಗ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬದುಕಿನಲ್ಲಿ ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿಲ್ಲ, ಆದರೆ ಬದುಕನ್ನು ಹೇಗೆ ನಡೆಸಬೇಕು ಎಂಬುದು ನಮ್ಮ ಕೈಯಲ್ಲಿದೆ ಎಂದು ಹೇಳಿದರು. ಮನುಷ್ಯರು ಇಲ್ಲದ ವಿಚಾರಗಳ ಬಗ್ಗೆ ಹೆಚ್ಚು ಚಿಂತಿಸುತ್ತಾರೆ, ಆದರೆ ತಮ್ಮ ಕಾಯಕದ ಬಗ್ಗೆ ಚಿಂತಿಸೋದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ದುಡಿಯುವ ಮೂಲಕವೇ ಜೀವನದಲ್ಲಿ ಯಶಸ್ಸು ಮತ್ತು ಸಂತೃಪ್ತಿ ಸಿಗುತ್ತದೆ ಎಂದರು.
ಮಾನವನ ಜೀವನದಲ್ಲಿ ಯಾವುದೋ ಒಂದು ಕೊರತೆ ಇರುವುದು ಸಹಜ. ಕೊರತೆ ಇದ್ದರೆ ಮನುಷ್ಯ ಹೆಚ್ಚು ದುಡಿಯುತ್ತಾನೆ ಎಂದು ಹೇಳಿದರು. ಹಣೆಬರಹ ಬದಲಿಸಬೇಕಾದರೆ ಕೈಯಲ್ಲಿನ ಗೆರೆ ಸವಿಯುವಂತೆ ದುಡಿಯಬೇಕು ಎಂದು ಹೇಳಿದರು. ಬಸವಣ್ಣನವರ ಸಂದೇಶದಂತೆ ಕಾಯಕವೇ ಕೈಲಾಸ ಎಂದು ಹೇಳಿ, ಕಾಯಕ ಮತ್ತು ಕರ್ತವ್ಯ ಎರಡಕ್ಕೂ ಮಹತ್ವ ನೀಡಬೇಕು ಎಂದು ತಿಳಿಸಿದರು.
ತಮ್ಮ ಬಗ್ಗೆ ಮಾತನಾಡಿದ ಬೊಮ್ಮಾಯಿ, ತಾವು ಕರ್ಣನಂತಹ ವ್ಯಕ್ತಿತ್ವಕ್ಕೆ ಸೇರಿದವನು ಎಂದು ಹೇಳಿ, ಹೊಗಳಿಕೆ ಕೇಳುವುದಕ್ಕೆ ಭಯವಾಗುತ್ತದೆ ಎಂದರು. ಅಧಿಕಾರ ಮತ್ತು ಸ್ಥಾನಮಾನ ಶಾಶ್ವತವಲ್ಲ, ಆದರೆ ಮಾಡಿದ ಕೆಲಸ ಮಾತ್ರ ಶಾಶ್ವತವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಸಂಗನಬಸವ ಮಹಾಸ್ವಾಮಿಗಳು, ಶ್ರೀ ಬಸವಲಿಂಗ ದೇವರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa