


ಗದಗ, 07 ಮಾರ್ಚ್ (ಹಿ.ಸ.)
ಆ್ಯಂಕರ್:
ಚಿನ್ನದ ಬೆಲೆ ದಿನೇ ದಿನೇ ಗಗನಕ್ಕೇರಿರುವ ಈ ಸಮಯದಲ್ಲೂ ಗದಗ ನಗರದಲ್ಲಿ ಭಕ್ತರು ಕೆಜಿಗಟ್ಟಲೆ ಚಿನ್ನವನ್ನು ದೇವರಿಗೆ ಅರ್ಪಿಸಿ ಭಕ್ತಿ ಪ್ರದರ್ಶಿಸುವ ವಿಶಿಷ್ಟ ಪರಂಪರೆ ಜೀವಂತವಾಗಿದೆ. ನಗರದಲ್ಲಿನ ಚಂದ್ರಸಾಲಿ ಕಿಲ್ಲಾ ಓಣಿಯಲ್ಲಿ ನಡೆಯುವ ಐತಿಹಾಸಿಕ ಕಾಮರತಿ ಉತ್ಸವದ ಅಂಗವಾಗಿ ರತಿ ದೇವಿಗೆ ಭಕ್ತರು ನೀಡಿದ ಚಿನ್ನದ ಆಭರಣಗಳಿಂದ ಅದ್ಧೂರಿಯಾಗಿ ಅಲಂಕಾರ ಮಾಡಲಾಗಿದ್ದು, ‘ಗೋಲ್ಡನ್ ಕಾಮರತಿ’ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.
ಗದಗದ ಈ ಕಾಮರತಿ ಉತ್ಸವಕ್ಕೆ ಸುಮಾರು 161 ವರ್ಷಗಳ ಇತಿಹಾಸವಿದೆ. 1865ರಿಂದಲೇ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದ್ದು, ಪ್ರತಿವರ್ಷ ರಂಗಪಂಚಮಿ ದಿನದಂದು ರತಿ ದೇವಿಗೆ ಭಕ್ತರು ನೀಡಿದ ಚಿನ್ನದ ಆಭರಣಗಳಿಂದ ವಿಶೇಷ ಅಲಂಕಾರ ಮಾಡಲಾಗುತ್ತದೆ. ಈ ಬಾರಿ ಸಹ ಭಕ್ತರಿಂದ ಬರೋಬ್ಬರಿ ಸುಮಾರು 25 ಕೆಜಿ ಚಿನ್ನದ ಆಭರಣಗಳು ಅಲಂಕಾರಕ್ಕಾಗಿ ನೀಡಲ್ಪಟ್ಟಿವೆ.
ಉತ್ಸವ ಸಮಿತಿಯವರು ಭಕ್ತರಿಂದ ಸ್ವೀಕರಿಸಿದ ಚಿನ್ನದ ಆಭರಣಗಳಿಗೆ ಪ್ರತ್ಯೇಕ ಟ್ಯಾಗ್ ಹಾಕಿ ಸುರಕ್ಷಿತವಾಗಿ ಇಟ್ಟುಕೊಂಡು, ರಂಗಪಂಚಮಿ ದಿನ ರತಿ ದೇವಿಗೆ ಅಲಂಕಾರ ಮಾಡುತ್ತಾರೆ. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಕಾಮರತಿ ಮೆರವಣಿಗೆ ನಡೆಸಲಾಗುತ್ತದೆ. ಉತ್ಸವದ ಬಳಿಕ ಭಕ್ತರು ನೀಡಿದ ಚಿನ್ನದ ಆಭರಣಗಳನ್ನು ಮೂಲ ಮಾಲೀಕರಿಗೆ ವಾಪಸ್ ನೀಡಲಾಗುತ್ತದೆ. ನೂರಾರು ವರ್ಷಗಳಿಂದ ಈ ಸಂಪ್ರದಾಯ ಯಾವುದೇ ಅಡಚಣೆಯಿಲ್ಲದೆ ಮುಂದುವರಿದಿರುವುದು ವಿಶೇಷ.
ಗದಗದ ಈ ಕಾಮರತಿಯನ್ನು “ಸರ್ಕಾರಿ ಕಾಮ” ಎಂದೂ ಕರೆಯಲಾಗುತ್ತದೆ. ಬ್ರಿಟಿಷರ ಕಾಲದಲ್ಲಿಯೇ ಇಲ್ಲಿನ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಈ ಉತ್ಸವದಲ್ಲಿ ಭಾಗವಹಿಸುತ್ತಿದ್ದರು ಎನ್ನಲಾಗುತ್ತದೆ. ಅಂದಿನ ಕಾಲದಲ್ಲಿ ಬ್ರಿಟಿಷ್ ಅಧಿಕಾರಿಗಳು ಉತ್ಸವಕ್ಕೆ ದೇಣಿಗೆಯನ್ನೂ ನೀಡುತ್ತಿದ್ದರೆಂಬ ಮಾತುಗಳು ಸ್ಥಳೀಯರಲ್ಲಿ ಕೇಳಿಬರುತ್ತವೆ. ಆ ಕಾರಣದಿಂದಲೇ ಈ ಉತ್ಸವಕ್ಕೆ “ಸರ್ಕಾರಿ ಕಾಮ” ಎಂಬ ಹೆಸರು ಬಂದಿದೆ ಎಂದು ಆಯೋಜಕರಾದ ಸುಧೀರ್ ತಿಳಿಸಿದ್ದಾರೆ.
ಇಲ್ಲಿನ ಕಾಮರತಿ ಮೂರ್ತಿಯನ್ನು ಕೊಪ್ಪಳ ಜಿಲ್ಲೆಯ ಕಿನ್ನಾಳದಲ್ಲಿ ತಯಾರಿಸಲಾಗಿದೆ. ನೂರಾರು ವರ್ಷಗಳ ಹಿಂದೆ ಗದಗದ ಹಿರಿಯರು ಕಿನ್ನಾಳಕ್ಕೆ ತೆರಳಿ ಈ ಮೂರ್ತಿಯನ್ನು ತರಿಸಿ ಪ್ರತಿಷ್ಠಾಪನೆ ಮಾಡಿದ್ದು, ಆಗಿನಿಂದಲೇ ಅದೇ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತಿದೆ.
ಇಲ್ಲಿನ ರತಿ ಕಾಮನನ್ನು ಭಕ್ತರು ಇಷ್ಟಾರ್ಥ ಸಿದ್ಧಿ ನೀಡುವ ದೈವವೆಂದು ನಂಬುತ್ತಾರೆ. ಸಂತಾನ ಭಾಗ್ಯಕ್ಕಾಗಿ, ಮದುವೆ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಅನೇಕರು ಇಲ್ಲಿ ಹರಿಕೆ ಕಟ್ಟುತ್ತಾರೆ. ಮಕ್ಕಳಾಗದ ದಂಪತಿಗಳು ಚಿನ್ನದ ತೊಟ್ಟಿಲು ಕಟ್ಟುವ ಹರಿಕೆ ಮಾಡುತ್ತಾರೆ ಎಂಬ ನಂಬಿಕೆಯೂ ಇದೆ. ಮದುವೆಯಾಗದ ಯುವಕ-ಯುವತಿಯರು ಕಂಕಣ ಕಟ್ಟಿಕೊಂಡು ಪ್ರಾರ್ಥನೆ ಸಲ್ಲಿಸಿದರೆ ಮದುವೆ ಸಾಧ್ಯವಾಗುತ್ತದೆ ಎಂಬ ಭಕ್ತಿ ಭಾವನೆಯೂ ಇದೆ ಎಂದು ಭಕ್ತರು ಹೇಳುತ್ತಾರೆ.
ಈ ಕಾರಣಗಳಿಂದಲೇ ಗದಗ ಮಾತ್ರವಲ್ಲದೆ ಕೊಪ್ಪಳ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ನೆರೆಯ ಮಹಾರಾಷ್ಟ್ರ ರಾಜ್ಯದಿಂದಲೂ ಭಕ್ತರು ಆಗಮಿಸಿ ಕಾಮರತಿ ದರ್ಶನ ಪಡೆಯುತ್ತಿದ್ದಾರೆ. ತಮ್ಮ ಹರಿಕೆಗಳನ್ನು ಕಟ್ಟಿಕೊಂಡು, ಇಷ್ಟಾರ್ಥಗಳು ಈಡೇರಿದ ಬಳಿಕ ರತಿ ಉಡಿತುಂಬಿ ಉತ್ಸವದಲ್ಲಿ ಭಾಗಿಯಾಗುವ ಸಂಪ್ರದಾಯವೂ ಇದೆ.
ಭಕ್ತರು ನೀಡುವ ಚಿನ್ನದ ಮೌಲ್ಯ ಕೋಟ್ಯಾಂತರ ರೂಪಾಯಿಗಳನ್ನು ತಲುಪಿದ್ದರೂ, ಅಲಂಕಾರದ ನಂತರ ಯಾವುದೇ ವ್ಯತ್ಯಾಸವಾಗದೇ ಅದೇ ಚಿನ್ನವನ್ನು ಮಾಲೀಕರಿಗೆ ವಾಪಸ್ ನೀಡಲಾಗುತ್ತದೆ ಎನ್ನುವುದು ಈ ಉತ್ಸವದ ಮತ್ತೊಂದು ವಿಶೇಷ. ಹೀಗಾಗಿ “ರತಿ ಕಾಮನಿಗೆ ಚಿನ್ನ ಅರ್ಪಿಸಿದರೆ ಮುಂದಿನ ವರ್ಷ ಚಿನ್ನ ದ್ವಿಗುಣವಾಗುತ್ತದೆ” ಎಂಬ ನಂಬಿಕೆಯಿಂದ ಭಕ್ತರು ಸಂತೋಷದಿಂದ ಚಿನ್ನದ ಆಭರಣಗಳನ್ನು ನೀಡುತ್ತೇವೆ ಎಂದು ಭಕ್ತರು ಡಾ: ಸಂಧ್ಯಾ ಹೇಳಿದ್ದಾರೆ.
ಒಟ್ಟಿನಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಗದಗದ ಕಾಮರತಿ ಉತ್ಸವವು ಭಕ್ತಿ, ನಂಬಿಕೆ ಮತ್ತು ಸಂಪ್ರದಾಯಗಳ ಅಪೂರ್ವ ಸಂಕಲನವಾಗಿದ್ದು, ಗೋಲ್ಡನ್ ಕಾಮರತಿ ದರ್ಶನಕ್ಕಾಗಿ ಭಕ್ತರ ಸಾಗರವೇ ಹರಿದು ಬರುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP