ಮತದಾರರನ್ನೇ ಮರೆತ ಕಾಂಗ್ರೆಸ್ ಮತ್ತು ಸಿಎಂ
ಬಳ್ಳಾರಿ, 07 ಮಾರ್ಚ್ (ಹಿ.ಸ.): ಆ್ಯಂಕರ್: ಜಿಲ್ಲೆಯ ಐದಕ್ಕೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗರೇ ಶಾಸಕರು. ಸಂಸದರೂ ಕಾಂಗ್ರೆಸ್ಸಿಗರು ಮತ್ತು ಬಳ್ಳಾರಿ ಮಹಾನಗರ ಪಾಲಿಕೆಯಲ್ಲೂ ಅಧಿಕಾರ. ಆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ರ ಸಾಲಿನ ಬಜೆಟ್ನಲ್ಲಿ `ಶೂನ್ಯ''. ಕಾಂಗ್ರ
ಮತದಾರರನ್ನೇ ಮರೆತ ಕಾಂಗ್ರೆಸ್ ಮತ್ತು ಸಿಎಂ


ಬಳ್ಳಾರಿ, 07 ಮಾರ್ಚ್ (ಹಿ.ಸ.):

ಆ್ಯಂಕರ್: ಜಿಲ್ಲೆಯ ಐದಕ್ಕೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗರೇ ಶಾಸಕರು. ಸಂಸದರೂ ಕಾಂಗ್ರೆಸ್ಸಿಗರು ಮತ್ತು ಬಳ್ಳಾರಿ ಮಹಾನಗರ ಪಾಲಿಕೆಯಲ್ಲೂ ಅಧಿಕಾರ. ಆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ರ ಸಾಲಿನ ಬಜೆಟ್ನಲ್ಲಿ `ಶೂನ್ಯ'. ಕಾಂಗ್ರೆಸ್ಗೆ ಸಂಪೂರ್ಣ ಅಧಿಕಾರ ನೀಡಿರುವ `ಮತದಾರಪ್ರಭು'ವನ್ನೇ ಮರೆತ ಮುಖ್ಯಮಂತ್ರಿ ಸಿದ್ದರಾಮಯ್ಯ. ಪ್ರತಿಯೊಂದಕ್ಕೂ ಜಿಲ್ಲಾ ಖನಿಜ ನಿಧಿ (ಡಿಎಂಎಫ್), ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಧಿ (ಕೆಎಂಇಆರ್ಸಿ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ)ಯತ್ತ ಕೈತೋರಿಸುವ ಸರ್ಕಾರ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡನೆ ಮಾಡಿರುವ ಅವರ ಜೀವಮಾನ ಸಾಧನೆಯ 17ನೆಯ ಬಜೆಟ್ನಲ್ಲಿ ಬಳ್ಳಾರಿ ಜಿಲ್ಲೆಗೆ ಏನನ್ನೂ ವಿಶೇಷವಾಗಿ ಕೊಟ್ಟಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು, ಒಳಚರಂಡಿ, ಆರೋಗ್ಯ, ಶಿಕ್ಷಣ, ರಸ್ತೆಗಳು ಹೀಗೇ ಹತ್ತಾರು ಮೂಲಭೂತ ಸಮಸ್ಯೆಗಳು ಜೀವಂತವಾಗಿವೆ. ಆದರೂ, ಯಾವದಕ್ಕೂ ಸರ್ಕಾರ ಸ್ಪಂದಿಸಿಲ್ಲ ಎನ್ನುವುದು ಜನರ ಬೇಸರ.

ಬಳ್ಳಾರಿಯ ಸಿರಿವಾರದ ಸಮೀಪದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಧಿ (ಕೆಎಂಇಆರ್ಸಿ) ಹಣ ಬಳಸಿಕೊಳ್ಳಲು ಸರ್ಕಾರ ಹೇಳಿತ್ತು. ಆದರೆ, ಈ ಪ್ರದೇಶವು ಗಣಿ ಬಾಧಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎನ್ನುವುದು ಅಧಿಕಾರಿಗಳ ವಾದ. ಹೀಗಾಗಿ ಒಂದು ವರ್ಷದಿಂದ ಒಂದು ಪೈಸೆಯೂ ಬಿಡುಗಡೆ ಆಗಿಲ್ಲ. ಈ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದರೂ, ಪರಿಹಾರ ಸಿಕ್ಕಿಲ್ಲ.

ಬಳ್ಳಾರಿಯ ಆಲದಹಳ್ಳಿ ಸಮೀಪ ಅತ್ಯಾಧುನಿಕ ಒಣ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣಕ್ಕೆ ಎರೆಡುಬಾರಿ ಪಿಪಿಇ ಮಾಡಲ್ನಲ್ಲಿ ಟೆಂಡರ್ ಕರೆಯಲಾಗಿತ್ತು. ಸರ್ಕಾರವೇ ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳೀಯರು ಒತ್ತಡ ಹೇರಿದ ಕಾರಣ ಕೃಷಿ ಸಚಿವರು `ಹ್ಹೂಂ, ಬಜೆಟ್ನಲ್ಲಿ ನಿಮ್ಮ ಕೆಲಸ ಆಗಲಿದೆ' ಎಂದಿದ್ದರು. ಆದರೆ, ಬಜೆಟ್ನಲ್ಲಿ ವಿಷಯ ಪ್ರಸ್ತಾಪವೇ ಆಗಿಲ್ಲ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆ ಮತ್ತು ಭಾರತ್ ಯಾತ್ರಾ ಕಾಲ್ನಡಿಗೆಯ ಸಂದರ್ಭದಲ್ಲಿ `ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಜೀನ್ಸ್ ಪಾರ್ಕ್ (ಅಪಾರಲ್ ಪಾಕ್) ನಿರ್ಮಾಣ ಮಾಡುತ್ತೇವೆ. 5000 ಕೋಟಿ ರೂಪಾಯಿ ಬಂಡವಾಳ ಹೂಡುತ್ತೇವೆ' ಎಂದಿದ್ದರೂ, ಈ ವರ್ಷ ಈ ವಿಷಯ ಧ್ವನಿಯೇ ಎಲ್ಲೂ ಇಲ್ಲ.

ದಶಕಗಳಿಂದ ಬಜೆಟ್ನಲ್ಲಿ ಮಾತ್ರ ಮಾತಾಗುವ ತುಂಗಭದ್ರಾ ಜಲಾಶಯಕ್ಕೆ ನವಲಿಯ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಹಣ ಕಾಯ್ದಿರಿಸುವ ಪ್ರಸ್ತಾವವೂ ಇಲ್ಲವಾಗಿದೆ. ಆದರೆ, ಬಸವರಾಜ ಬೊಮ್ಮಾಯಿ ಅವರು 1000 ಕೋಟಿ ರೂಪಾಯಿಯ ನಿಧಿಯನ್ನು ರಚಿಸಿದ್ದು, ಏನಾಯ್ತು ಎನ್ನುವ ಲೆಕ್ಕವೂ ಇಲ್ಲವಾಗಿದೆ.

ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 1200 ಎಕರೆ ಭೂಮಿಯನ್ನು ಕುಡತಿನಿ ಬಳಿ ಸ್ವಾಧೀನಕ್ಕೆ ಪಡೆದು, ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದರೂ, ಬಂಡವಾಳಗಾರರಿಗೆ ಭೂಮಿ ನೀಡುತ್ತಿಲ್ಲ. ಈ ವಿಷಯವೂ ಇಲ್ಲವಾಗಿದೆ. ಬಳ್ಳಾರಿ - ಸಿರುಗುಪ್ಪ ; ಸಿಂಧನೂರು ಮತ್ತು ಬಳ್ಳಾರಿ - ರಾಯದುರ್ಗ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನ ಮಾಡಿಕೊಳ್ಳುವ ವಿಚಾರಗಳು ದಶಕಗಳಿಂದ ನೆನೆಗುದಿಗೆ ಬಿದ್ದಿವೆ.

ಸಂಡೂರು ಪಟ್ಟಣದಲ್ಲಿ `ಸ್ಕಿಲ್ ಯೂನಿವರ್ಸಿಟಿ ಅಥವಾ ಕಾಲೇಜು' ಪ್ರಾರಂಭಿಸುವ ವಿಷಯವು ಕೇವಲ ಈ ಭಾಗದ ಮತದಾರರ ಮೂಗಿಗೆ ತುಪ್ಪ ಸವರುವ - ಮತಸೆಳೆಯುವ ವಿಷಯಗಳಾಗಿ ಸದಾ ಪ್ರಚಾರಕ್ಕೆ ಆಹಾರವಾಗುತ್ತಿವೆ. ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಮುಂದೆ `ಧ್ವನಿ ಇಲ್ಲ'ದವರಾಗಿದ್ದಾರೆಯೇ? ಎನ್ನುವ ಪ್ರಶ್ನೆ ಜನರದ್ದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande