
ಗದಗ, 31 ಮಾರ್ಚ್ (ಹಿ.ಸ.)
ಆ್ಯಂಕರ್:- ರಾಜ್ಯಾದ್ಯಂತ ನಡೆಯುತ್ತಿರುವ ಎಸ್ಎಸ್ಎಲ್ಸಿ ಪರೀಕ್ಷೆಗಳ ಹಿನ್ನೆಲೆ ಗದಗ ಜಿಲ್ಲೆಯ ರೋಣ ತಾಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಹಾಗೂ ಭದ್ರತೆ ಕಾಪಾಡಲು ಮಾಜಿ ಸೈನಿಕರ ಸಂಘದ ಸದಸ್ಯರು ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹವಾಗಿದೆ.
ಗದಗ ಜಿಲ್ಲೆ ರೋಣ ತಾಲೂಕಿನ ವಿವಿಧ ಗ್ರಾಮಗಳ ಮಾಜಿ ಸೈನಿಕರನ್ನು ಪರೀಕ್ಷಾ ಅವಧಿಯಲ್ಲಿ ನಿಯೋಜಿಸಲಾಗಿದ್ದು, ಅವರು ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಯೊಂದಿಗೆ ಕೈಜೋಡಿಸಿ ಪರೀಕ್ಷೆಗಳು ಸುಗಮವಾಗಿ ನಡೆಯಲು ಸಹಕರಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಈ ಸೇವೆಯನ್ನು ಸಲ್ಲಿಸುತ್ತಿರುವುದು ವಿಶೇಷ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ ಅವರು ಶ್ರೀ ವೀರಭದ್ರೇಶ್ವರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಆಕಸ್ಮಿಕ ಭೇಟಿ ನೀಡಿದ ಸಂದರ್ಭದಲ್ಲಿ, ಕೇಂದ್ರದ ಮುಂಭಾಗ ಹಾಗೂ ಹಿಂಭಾಗಗಳಲ್ಲಿ ಮಾಜಿ ಸೈನಿಕರು ಪೊಲೀಸರಂತೆ ಪಹರೆ ನಿಂತು ವಿದ್ಯಾರ್ಥಿಗಳ ಪರೀಕ್ಷೆಗೆ ಯಾವುದೇ ಅಡಚಣೆ ಉಂಟಾಗದಂತೆ ಕಾವಲು ಕಾಯುತ್ತಿರುವುದು ಗಮನಸೆಳೆಯಿತು.
ವಿದ್ಯಾರ್ಥಿಗಳಿಗೆ ಅನುಕೂಲಕರ ಹಾಗೂ ಶಾಂತ ವಾತಾವರಣ ನಿರ್ಮಿಸಲು ಮಾಜಿ ಸೈನಿಕರ ಸೇವೆ ಮಹತ್ವದ್ದಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ವಿವಿಧ ವಲಯಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಾಜಿ ಸೈನಿಕರ ಸೇವಾಭಾವನೆಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP