ವಿಶೇಷ ಚೇತನ ಮಕ್ಕಳೊಂದಿಗೆ ಹುಟ್ಟುಹಬ್ಬ: ಮಾನವೀಯತೆ ಮೆರೆದ ಮಂಜುನಾಥ ಹಿರೇಮಠ
ಗದಗ, 31 ಮಾರ್ಚ್ (ಹಿ.ಸ.) ಆ್ಯಂಕರ್:- ಸಮಾಜ ಸೇವೆಯ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವುದು ಇಂದಿನ ಕಾಲದಲ್ಲಿ ಅಪರೂಪವಾಗುತ್ತಿರುವ ಸಂದರ್ಭದಲ್ಲೇ, ವಿಶ್ವ ಕಲ್ಯಾಣ (ರಿ) ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಕುಮಾರ ಮಂಜುನಾಥ ಹಿರೇಮಠ ಅವರ ಹುಟ್ಟುಹಬ್ಬವನ್
ಫೋಟೋ


ಗದಗ, 31 ಮಾರ್ಚ್ (ಹಿ.ಸ.)

ಆ್ಯಂಕರ್:- ಸಮಾಜ ಸೇವೆಯ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವುದು ಇಂದಿನ ಕಾಲದಲ್ಲಿ ಅಪರೂಪವಾಗುತ್ತಿರುವ ಸಂದರ್ಭದಲ್ಲೇ, ವಿಶ್ವ ಕಲ್ಯಾಣ (ರಿ) ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಕುಮಾರ ಮಂಜುನಾಥ ಹಿರೇಮಠ ಅವರ ಹುಟ್ಟುಹಬ್ಬವನ್ನು ವಿಶಿಷ್ಟ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಆಚರಿಸಲಾಯಿತು.

ಗದಗ ನಗರದ ಭುವನೇಶ್ವರಿ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಮಂಜುನಾಥ ಹಿರೇಮಠ ಅವರು ತಮ್ಮ ಹುಟ್ಟುಹಬ್ಬವನ್ನು ವಿಶೇಷ ಮಕ್ಕಳೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಆಚರಿಸಿಕೊಂಡರು. ಸಾಮಾನ್ಯವಾಗಿ ಕುಟುಂಬ ಮತ್ತು ಸ್ನೇಹಿತರ ನಡುವೆ ನಡೆಯುವ ಹುಟ್ಟುಹಬ್ಬದ ಆಚರಣೆಯನ್ನು ಬಿಟ್ಟು, ವಿಶೇಷ ಮಕ್ಕಳೊಂದಿಗೆ ಹಂಚಿಕೊಂಡು ಅವರ ಮುಖದಲ್ಲಿ ನಗು ಮೂಡಿಸಿದ ಈ ನಡೆ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದ ಆರಂಭದಲ್ಲಿ ದೀಪ ಪ್ರಜ್ವಲನೆ ಮಾಡಲಾಗಿದ್ದು, ನಂತರ ಮಂಜುನಾಥ ಹಿರೇಮಠ ಅವರು ಮಕ್ಕಳೊಂದಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಬಳಿಕ ಎಲ್ಲ ಮಕ್ಕಳಿಗೂ ಸಿಹಿ ಹಂಚಿ, ಊಟದ ವ್ಯವಸ್ಥೆ ಮಾಡಲಾಗಿತ್ತು. ವಿಶೇಷವೆಂದರೆ, ಮಂಜುನಾಥ ಅವರು ಸ್ವತಃ ಮಕ್ಕಳಿಗೆ ಊಟವನ್ನು ಬಡಿಸಿ, ಅವರೊಂದಿಗೆ ಸಮಯ ಕಳೆಯುವ ಮೂಲಕ ಮಾನವೀಯತೆ ಮೆರೆದರು.

ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನಾ ಸೊಲಗಿ, ಗೋವಿಂದ ಅನಸೂರ, ದರ್ಶನ ಖಂಡೆಪ್ಪನವರ, ಅಶೋಕ ರಡ್ಡಿಯರ ಹಾಗೂ ಮಂಜುನಾಥ ಆಸಂಗಿ ಅವರು, “ದೇವರು ದೇವಸ್ಥಾನಗಳಲ್ಲಿ ಮಾತ್ರವಲ್ಲ, ಇಂತಹ ನಿರಪರಾಧಿ ಮಕ್ಕಳಲ್ಲಿಯೇ ಇದ್ದಾನೆ. ಇಂತಹ ವಿಶೇಷ ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ, ಅದನ್ನು ಬೆಳಗಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ” ಎಂದು ಭಾವುಕರಾಗಿ ಹೇಳಿದರು. ಇದೇ ವೇಳೆ ಅವರು ಶಾಲೆಯ ಅಭಿವೃದ್ಧಿಗಾಗಿ ದೇಣಿಗೆಯನ್ನು ನೀಡಿ ಸಹಾಯ ಹಸ್ತ ಚಾಚಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಮಂಜುನಾಥ ಹದ್ದಣ್ಣವರ ವಹಿಸಿಕೊಂಡು ಮಾತನಾಡಿ, ಇಂತಹ ಮಾನವೀಯ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು. ಶಾಲೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿ, ವಿಶೇಷ ಮಕ್ಕಳಿಗೆ ಅಗತ್ಯವಾದ ಬೆಂಬಲವನ್ನು ಎಲ್ಲರೂ ನೀಡಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಶಾಂತಮ್ಮಾ ಹೂಗಾರ, ಶಾಲೆಯ ಸಿಬ್ಬಂದಿ, ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದು, ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಾಗೂ ಊಟವನ್ನು ನೀಡಲಾಗಿದ್ದು, ವಿಶೇಷ ಮಕ್ಕಳೊಂದಿಗೆ ಎಲ್ಲ ಗಣ್ಯರು ಬೆರೆತು ಸಂಭ್ರಮಿಸಿದ ಕ್ಷಣಗಳು ಮನಮುಟ್ಟುವಂತಿದ್ದವು.

ಮಂಜುನಾಥ ಹಿರೇಮಠ ಅವರ ಈ ಮಾನವೀಯ ಕಾರ್ಯ, ಹುಟ್ಟುಹಬ್ಬವನ್ನು ಹೇಗೆ ಅರ್ಥಪೂರ್ಣವಾಗಿ ಆಚರಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿ, ಸಮಾಜದಲ್ಲಿ ಪರಸ್ಪರ ಸಹಕಾರ ಮತ್ತು ಪ್ರೀತಿ ಬೆಳೆಸುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಾಗಲಿ ಎಂಬ ಆಶಯ ವ್ಯಕ್ತವಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande