ಗ್ಯಾಸ್ ದರ ಏರಿಕೆ ವಿರುದ್ಧ ಆಟೋ ಚಾಲಕರ ಉಗ್ರ ಪ್ರತಿಭಟನೆ
ಗದಗ, 31 ಮಾರ್ಚ್ (ಹಿ.ಸ.) ಆ್ಯಂಕರ್:- ಎಲ್ಪಿಜಿ ಗ್ಯಾಸ್ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿ ಗದಗ–ಬೆಟಗೇರಿ ಅವಳಿ ನಗರದಲ್ಲಿ ಆಟೋ ಚಾಲಕರು ಉಗ್ರ ಪ್ರತಿಭಟನೆ ನಡೆಸಿದರು. ಅನಿಯಂತ್ರಿತವಾಗಿ ಗ್ಯಾಸ್ ದರ ಹೆಚ್ಚಳ ಮಾಡಲಾಗುತ್ತಿದೆ ಎಂದು ಆರೋಪಿಸಿದ ಚಾಲಕರು, ವಿವಿಧ ಗ್ಯಾಸ್ ಬಂಕ್ಗಳಿಗೆ ನುಗ್ಗಿ ಘೋಷಣೆ ಕೂಗಿ
ಫೋಟೋ


ಗದಗ, 31 ಮಾರ್ಚ್ (ಹಿ.ಸ.)

ಆ್ಯಂಕರ್:- ಎಲ್ಪಿಜಿ ಗ್ಯಾಸ್ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿ ಗದಗ–ಬೆಟಗೇರಿ ಅವಳಿ ನಗರದಲ್ಲಿ ಆಟೋ ಚಾಲಕರು ಉಗ್ರ ಪ್ರತಿಭಟನೆ ನಡೆಸಿದರು. ಅನಿಯಂತ್ರಿತವಾಗಿ ಗ್ಯಾಸ್ ದರ ಹೆಚ್ಚಳ ಮಾಡಲಾಗುತ್ತಿದೆ ಎಂದು ಆರೋಪಿಸಿದ ಚಾಲಕರು, ವಿವಿಧ ಗ್ಯಾಸ್ ಬಂಕ್ಗಳಿಗೆ ನುಗ್ಗಿ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆಯಿಂದಲೇ ನಗರದಲ್ಲಿನ ಪ್ರಮುಖ ಗ್ಯಾಸ್ ಬಂಕ್ಗಳ ಮುಂದೆ ಜಮಾಯಿಸಿದ ಆಟೋ ಚಾಲಕರು, ತಮ್ಮ ವಾಹನಗಳೊಂದಿಗೆ ಬಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. “ಗ್ಯಾಸ್ ಬಂಕ್ ಮಾಲೀಕರು ಬೆಕ್ಕಾಬಿಟ್ಟಿಯಾಗಿ ದರ ಹೆಚ್ಚಳ ಮಾಡುತ್ತಿದ್ದಾರೆ. ಇದು ನೇರವಾಗಿ ನಮ್ಮ ಜೀವನೋಪಾಯಕ್ಕೆ ಹೊಡೆತ ನೀಡುತ್ತಿದೆ” ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಕೆಲ ಸಮಯ ಬಂಕ್ಗಳಲ್ಲಿ ವ್ಯವಹಾರ ಸ್ಥಗಿತಗೊಂಡು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಚಾಲಕರ ಆರೋಪದ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕ ಮೂಡಿದ ಸಮಯದಲ್ಲಿ ಗ್ಯಾಸ್ ದರ ಪ್ರತಿ ಕೆಜಿ 65 ರೂಪಾಯಿ ಇತ್ತು. ಆದರೆ ಇದೀಗ ಅದನ್ನು ಏಕಾಏಕಿ 84.95 ರೂಪಾಯಿಗೆ ಏರಿಸಲಾಗಿದೆ. ಕೆಲವು ಬಂಕ್ಗಳಲ್ಲಿ 99.95 ರೂಪಾಯಿ ವರೆಗೆ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

“ಇದು ಸರಕಾರದ ನಿಗದಿತ ದರಕ್ಕಿಂತ ಬಹಳ ಅಧಿಕ. ಗ್ಯಾಸ್ ಬಂಕ್ಗಳವರು ಹಗಲು ದರೋಡೆ ನಡೆಸುತ್ತಿದ್ದಾರೆ” ಎಂದು ಅವರು ಆರೋಪಿಸಿದರು.

ಇನ್ನೊಂದೆಡೆ, ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಎಲ್ ಪಿ ಜಿ ಗ್ಯಾಸ್ ದರವನ್ನು 77.74 ರೂಪಾಯಿ ಎಂದು ಘೋಷಣೆ ಮಾಡಿರುವುದಾಗಿ ಹೇಳಿದ ಚಾಲಕರು,

ಗದಗ ಜಿಲ್ಲೆಯಲ್ಲಿ ಮಾತ್ರ ಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಸರಕಾರ ಒಂದು ದರ ಹೇಳಿದರೆ, ಬಂಕ್ ಮಾಲೀಕರು ಇನ್ನೊಂದು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಯಾರು ಹೊಣೆ?” ಎಂದು ಪ್ರಶ್ನಿಸಿದರು.

ಪ್ರತಿಭಟನೆಯ ವೇಳೆ ಗದಗ–ಬೆಟಗೇರಿ ಅವಳಿ ನಗರದ ಹಲವಾರು ಬಂಕ್ಗಳ ಮುಂದೆ ಘೋಷಣೆ ಕೂಗಿದ ಚಾಲಕರು, ಬಂಕ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. “ಈ ರೀತಿ ದರ ಏರಿಕೆ ಮುಂದುವರಿದರೆ ನಮ್ಮ ಕುಟುಂಬಗಳನ್ನು ಸಾಗಿಸಲು ಸಾಧ್ಯವಿಲ್ಲ. ತಕ್ಷಣ ದರ ನಿಯಂತ್ರಿಸಬೇಕು” ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಆಟೋ ಚಾಲಕ ಈರಣ್ಣ, “ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶ ಮಾಡಿ, ಸರಿಯಾದ ದರದಲ್ಲಿ ಗ್ಯಾಸ್ ಮಾರಾಟವಾಗುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಂಡರು. ಕೆಲಕಾಲ ಗ್ಯಾಸ್ ಬಂಕ್ಗಳ ಕಾರ್ಯಾಚರಣೆ ವ್ಯತ್ಯಯಗೊಂಡಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಯಿತು.

ಎಲ್ ಪಿ ಜಿ ದರ ಏರಿಕೆ ಪ್ರಶ್ನೆ ಗದಗ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಂಬಂಧಿತ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande