
ಟೆಹ್ರಾನ್/ಬಾಗ್ದಾದ್, 29 ಮಾರ್ಚ್ (ಹಿ.ಸ.):
ಆ್ಯಂಕರ್:
ಟೆಹ್ರಾನ್ ನಗರದಲ್ಲಿ ಭಾನುವಾರ ಬೆಳಿಗ್ಗೆ ಸರಣಿ ಸ್ಫೋಟಗಳು ಸಂಭವಿಸಿರುವುದಾಗಿ ವರದಿಯಾಗಿದೆ. ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆ ಮಾಹಿತಿ ಪ್ರಕಾರ, ಉತ್ತರ ಟೆಹ್ರಾನ್‌ನಲ್ಲಿ ಸುಮಾರು ಬೆಳಿಗ್ಗೆ 7:20ರ ಸುಮಾರಿಗೆ ಎರಡು ಪ್ರಬಲ ಸ್ಫೋಟಗಳು ಸಂಭವಿಸಿದ್ದು, ಗುರಿ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದೇ ವೇಳೆ ಇರಾಕ್‌ನ ಕುರ್ದಿಶ್ ಪ್ರದೇಶದಲ್ಲಿ ದಾಳಿಗಳ ಪ್ರಮಾಣ ಹೆಚ್ಚಳ ಕಂಡುಬಂದಿದ್ದು, ಪರಿಸ್ಥಿತಿ ಗಂಭೀರಗೊಂಡಿದೆ. ನೆಚಿರ್ವಾನ್ ಬರ್ಜಾನಿ ಅವರ ನಿವಾಸವನ್ನು ಗುರಿಯಾಗಿಸಿ ಹಲವು ಪ್ರಯತ್ನಗಳು ನಡೆದಿವೆ ಎಂದು ತಿಳಿದುಬಂದಿದೆ. ಅವರು ಬಾಗ್ದಾದ್ನ ಕೇಂದ್ರ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇರಾಕ್‌ನಲ್ಲಿ ಸಕ್ರಿಯವಾಗಿರುವ ಶಿಯಾ ಮಿಲಿಟಿಯಾ ಗುಂಪು ಸರಾಯ ಅವ್ಲಿಯಾ ಅಲ್-ಡಮ್ ಅಮೆರಿಕದ ಹಿತಾಸಕ್ತಿಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಿರುವುದಾಗಿ ಹೇಳಿಕೊಂಡಿದೆ. ಎರ್ಬಿಲ್ ಮತ್ತು ಹರಿರ್ ಪ್ರದೇಶಗಳಲ್ಲಿ ಅಮೆರಿಕದ ಸೈನಿಕ ನೆಲೆಗಳು ಹಾಗೂ ರಾಯಭಾರ ಕಚೇರಿಯನ್ನು ಡ್ರೋನ್ ಮತ್ತು ರಾಕೆಟ್ ದಾಳಿಗಳಿಂದ ಗುರಿಯಾಗಿಸಲು ಯತ್ನಿಸಲಾಗಿದೆ. ಆದರೆ ಈ ದಾಳಿಗಳನ್ನು ವಾಯು ರಕ್ಷಣಾ ವ್ಯವಸ್ಥೆಗಳು ವಿಫಲಗೊಳಿಸಿದ್ದಾಗಿ ವರದಿಯಾಗಿದೆ.
ಇದರ ನಡುವೆ ಇರಾನ್‌ನ ಶಕ್ತಿಶಾಲಿ ಸೇನಾ ಘಟಕ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಬಹ್ರೇನ್ ಮತ್ತು ಯುಎಇಯಲ್ಲಿನ ಕೈಗಾರಿಕಾ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡ ದಾಳಿಯ ಹೊಣೆ ಹೊತ್ತಿದೆ. ವಿಶೇಷವಾಗಿ ಅಲ್ಯೂಮಿನಿಯಂ ಬಹ್ರೇನ್ ಸ್ಥಾವರದ ಮೇಲೆ ದಾಳಿ ನಡೆದಿದ್ದು, ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
ಇಸ್ರೇಲ್-ಅಮೆರಿಕ ವಿರುದ್ಧ ಇರಾನ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಮಧ್ಯಪ್ರಾಚ್ಯದಲ್ಲಿನ ಪ್ರಮುಖ ಸೌಕರ್ಯಗಳು ಹಾಗೂ ಹಿತಾಸಕ್ತಿಗಳ ಮೇಲೆ ದಾಳಿಗಳು ಮುಂದುವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಜೊತೆಗೆ ಯೆಮೆನ್‌ನ ಹೌತಿ ಬಂಡುಕೋರರು ಕೂಡ ಇಸ್ರೇಲ್ ವಿರುದ್ಧ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕಟುವಾಗಿಸಿದೆ.
ಒಟ್ಟಾರೆ, ಮಧ್ಯಪ್ರಾಚ್ಯದಲ್ಲಿ ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಹಲವು ದೇಶಗಳಿಗೆ ವ್ಯಾಪಿಸುವ ಭೀತಿಯ ವಾತಾವರಣ ನಿರ್ಮಾಣವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa